

ನನಗೆ ಈ ವಿಚಾರವಾಗಿ ಏನೂ ಗೊತ್ತಿಲ್ಲ, ಅವರ ಬಳಿಯೇ ಕೇಳಿ. ಅವರು ಮಾತುಕತೆ ನಡೆಸಿರುವ ಬಗ್ಗೆ ನನ್ನನ್ನು ಕೇಳಿದರೆ ನಾನು ಏನು ಹೇಳಲಿ? ಅವರ ಭೇಟಿ ವಿಚಾರವಾಗಿ ನನಗಾಗಲಿ, ಸಿಎಂ ಅವರಿಗಾಗಲಿ ಮಾಹಿತಿ ನೀಡಿಲ್ಲ. ಇಲ್ಲಿ ಪಕ್ಷದ ವಿಚಾರ ಏನೂ ಇರುವುದಿಲ್ಲ. ರಾಷ್ಟ್ರೀಯ ಯೋಜನೆಗಳ ಬಗ್ಗೆ ಚರ್ಚೆ ಮಾಡಿರಬಹುದು. ಅವರಿಗೆ ಗೌರವ ಸಲ್ಲಿಸಲು ಹೋಗಿರಬಹುದು ಎಂದು DK ಶಿವಕುಮಾರ್ ತಿಳಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿರು. ಈ ಭೇಟಿ ಬಗ್ಗೆ ಅನೇಕ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಕೇಳಿದಾಗ, “ಈ ಬಗ್ಗೆ ನೀವು (ಮಾಧ್ಯಮಗಳು) ವ್ಯಾಖ್ಯಾನ ಮಾಡುತ್ತಿದ್ದೀರಿ. ಬೇರೆ ಇನ್ಯಾವುದೇ ವ್ಯಾಖ್ಯಾನಗಳಿಲ್ಲ” ಎಂದು ತಿಳಿಸಿದರು.
ಬಿಜೆಪಿ ಪಕ್ಷದಿಂದ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿರುವ ಬಗ್ಗೆ ಕೇಳಿದಾಗ, ಅದು ಅವರ ಪಕ್ಷದ ಆಂತರಿಕ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಾವು ಅದರಲ್ಲಿ ಯಾಕೆ ಹಸ್ತಕ್ಷೇಪ ಮಾಡಬೇಕು. ಅವರು ತಮ್ಮ ಮುತ್ತುರತ್ನಗಳನ್ನು ಎಲ್ಲೆಲ್ಲಿ ಇಟ್ಟುಕೊಳ್ಳಬೇಕೋ ಅಲ್ಲಿ ಇಟ್ಟುಕೊಳ್ಳಲಿ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪವಾಗಲಿದೆಯಂತೆ ಎಂಬುದು ನನಗೆ ಗೊತ್ತಿಲ್ಲ. ನಾನು ಸಿಎಂ ಅವರಿಗೆ ಕರೆ ಮಾಡಿ ಪಕ್ಷದ ಸಭೆ ಇದೆ ಎಂದು ಹೇಳಿ ದೆಹಲಿಗೆ ಬಂದಿದ್ದೇನೆ ಎಂದರು.
ಒಳಮೀಸಲಾತಿ ಮಧ್ಯಂತರ ವರದಿ ಬಗ್ಗೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಶಾಸಕರು, ಸಚಿವರು ಸಾಧಕ-ಬಧಕಗಳ ಬಗ್ಗೆ ಚರ್ಚೆ ಮಾಡುತ್ತಿದ್ದು, ಪಕ್ಷದಲ್ಲಿ ಚರ್ಚೆ ಮಾಡಿದ ನಂತರ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ, ನಮ್ಮ ಸಂಸದರು ಕರ್ನಾಟಕ ರಾಜ್ಯದ ಸ್ವಾಭಿಮಾನ ಹಾಗೂ ಗೌರವ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ರಾಯಚೂರಿನಲ್ಲಿ ಏಮ್ಸ್ ಆರಂಭಿಸಬೇಕು ಎಂದು ಪ್ರಸ್ತಾಪ ಮಾಡಲಾಗಿತ್ತು. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಯಚೂರಿನಲ್ಲಿ ಜಾಗ ನೀಡುವುದು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ ಎಂದು ತಿಳಿಸಿದರು.