

ಪ್ರಶ್ನೆ: ನ್ಯಾಯಾಂಗ ಇಲಾಖೆಯಲ್ಲಿ 2012ರಿಂದ ಶೀಘ್ರಲಿಪಿಗಾರಳಾಗಿ ಕೆಲಸ ಮಾಡುತ್ತಿದ್ದ ನನ್ನ ಪತ್ನಿ, 2021ರ ನವೆಂಬರ್ನಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾಳೆ. ನಾನು ಅನುಕಂಪದ ಮೇರೆಗೆ ಅದೇ ಇಲಾಖೆಯಲ್ಲಿ ದ್ವೀತಿಯ ದರ್ಜೆ ಸಹಾಯಕನಾಗಿ 2022ರ ಏಪ್ರಿಲ್ನಿಂದ ಕೆಲಸಕ್ಕೆ ಸೇರಿದ್ದೇನೆ. ನನಗೆ 8 ವರ್ಷದ ಹೆಣ್ಣು ಮಗುವಿದ್ದು, ಮಗಳ ಪಾಲನೆ-ಪೋಷಣೆಗೋಸ್ಕರ ಎರಡನೇ ಮದುವೆಯಾಗಲು ಇಚ್ಛಿಸಿದ್ದೇನೆ. ಪುನರ್ ವಿವಾಹವಾದರೆ, ನನ್ನ ಈಗಿನ ಕೆಲಸ ಹೋಗುತ್ತದೆಯೇ? ಕುಟುಂಬ ಪಿಂಚಣಿ ರದ್ದಾಗುತ್ತದೆಯೇ?
-ಮನೋಹರ್, ಬೆಂಗಳೂರು
ಉತ್ತರ: ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ನೇಮಕಾತಿ) ನಿಯಮಾವಳಿ 1996ರ ರೀತ್ಯಾ ನೀವು ಮರುವಿವಾಹವಾಗಬಹುದು. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಪುನರ್ ವಿವಾಹವಾದ ನಂತರ ನೇಮಕಾತಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ಎರಡನೇ ಪತ್ನಿಯ ನಾಮನಿರ್ದೇಶನ ಮಾಡಿಸಬೇಕು. ಆದ್ದರಿಂದ ನಿಮ್ಮ ನೌಕರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಕುಟುಂಬ ಪಿಂಚಣಿ ನಿಮ್ಮ ಮಗಳಿಗೆ 21 ವರ್ಷವಾಗುವವರೆಗೂ ಲಭ್ಯವಾಗುತ್ತದೆ.