21 ವರ್ಷಗಳ ಬಳಿಕ ಭಾರತೀಯ ಮಹಿಳೆಗೆ ಒಲಿದ ಮಿಸೆಸ್ ವರ್ಲ್ಡ್ ಪಟ್ಟ; ಸರ್ಗಂ ಕೌಶಲ್ ಮುಡಿಗೆ ಮಿಸೆಸ್​ ವರ್ಲ್ಡ್​ ಗರಿ

Mrs World
Published on

ನವದೆಹಲಿ: ಮಿಸೆಸ್​ ವರ್ಲ್ಡ್​ 2022 ಆಗಿ ಭಾರತದ ಸರ್ಗಂ ಕೌಶಲ್ ಆಯ್ಕೆ ಆಗಿದ್ದು, 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ಮಿಸೆಸ್ ವರ್ಲ್ಡ್ ಪಟ್ಟ ಸಿಕ್ಕಂತಾಗಿದೆ. 63 ದೇಶಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಭಾರತದ ಸರ್ಗಂ ಕೌಶಲ್ ವಿಜೇತರಾಗಿದ್ದಾರೆ.

ಮಿಸೆಸ್​ ವರ್ಲ್ಡ್ 2021 ಆಗಿದ್ದ ಶಾಯ್ಲಿನ್ ಫೋರ್ಡ್ ಅವರು ಶನಿವಾರ ಸರ್ಗಂ ಕೌಶಲ್​ಗೆ ಮಿಸ್ ವರ್ಲ್ಡ್ ಕಿರೀಟವನ್ನು ತೊಡಿಸಿದರು. ಮಿಸೆಸ್ ಪಾಲಿನೇಷ್ಯಾ ಮತ್ತು ಮಿಸೆಸ್ ಕೆನಡಾ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್​ ಆದರು. 21 ವರ್ಷಗಳ ಬಳಿಕ ಮಿಸೆಸ್​ ವರ್ಲ್ಡ್ ಕಿರೀಟ ಮರಳಿ ನಮಗೆ ಸಿಕ್ಕಿದೆ ಎಂದು ಸರ್ಗಂ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. 2001ರಲ್ಲಿ ನಟಿ-ರೂಪದರ್ಶಿ ಅದಿತಿ ಗೋವಿತ್ರಿಕರ್ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಿ ಮಿಸೆಸ್ ವರ್ಲ್ಡ್ ಗರಿ ಗಳಿಸಿದ್ದರು. ಅದಾಗ ಬಳಿಕ ಈಗಲೇ ಮಿಸೆಸ್ ವರ್ಲ್ಡ್ ಭಾರತಕ್ಕೆ ಸಿಕ್ಕಿರುವುದು.

ಜಮ್ಮು-ಕಾಶ್ಮೀರದ ಸರ್ಗಂ ಈ ತಿಂಗಳ ಜೂನ್​ನಲ್ಲಿ ಮಿಸೆಸ್ ಇಂಡಿಯಾ ವರ್ಲ್ಡ್​ 2022-23 ಆಗಿ ಆಯ್ಕೆ ಆಗಿದ್ದರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಮಿಸೆಸ್ ವರ್ಲ್ಡ್ 2022 ಆಗಿ ಹೊರಹೊಮ್ಮಿದ್ದಾರೆ. ವಿವಾಹಿತೆಯರಿಗೆಂದೇ ಆಯೋಜಿಸಲಾಗುವ ಈ ಮಿಸೆಸ್ ವರ್ಲ್ಡ್ ಸ್ಪರ್ಧೆ 1984ರಲ್ಲಿ ಆರಂಭಗೊಂಡಿತ್ತು. ಆರಂಭದಲ್ಲಿ ಇದನ್ನು ಮಿಸೆಸ್​ ವುಮನ್ ಆಫ್​ ದ ವರ್ಲ್ಡ್ ಎಂದು ಕರೆಯಲಾಗುತ್ತಿತ್ತು. ಬಳಿಕ 1988ರಲ್ಲಿ ಇದನ್ನು ಮಿಸೆಸ್ ವರ್ಲ್ಡ್ ಎಂದು ಮರು ನಾಮಕರಣ ಮಾಡಲಾಯಿತು. ಸುಮಾರು 80 ರಾಷ್ಟ್ರಗಳು ಸಾಮಾನ್ಯವಾಗಿ ಇದರಲ್ಲಿ ಭಾಗವಹಿಸುತ್ತಿದ್ದು, ಬಹುತೇಕವಾಗಿ ಅಮೆರಿಕನ್ನರೇ ವಿಜೇತರಾಗುತ್ತಿದ್ದರು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net