ಸರಗೂರು.: ಪ್ರತಿಯೊಬ್ಬರೂ ಉತ್ತಮ ಚಿಂತನೆಗಳನ್ನು ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಪಡುವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಹೇಳಿದರು. 11 ನೇ ವಾರ್ಡಿನ ಬಿಡಗಲು ಪಡುವಲು ವಿರಕ್ತ ಮಠದಲ್ಲಿ ಸೋಮವಾರ ಪೌರ್ಣಮಿ ಪೂಜಾ ಕಾರ್ಯಕ್ರಮ ಹಾಗೂ ಶಿವಾನುಭವ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನಸಿಕ ಮತ್ತು ದೈಹಿಕವಾಗಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ ನಾವು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಬಹುದು ಎಂದು ಅವರು ಕರೆ ನೀಡಿದರು.
ರಾಜಕೀಯ ಹುನ್ನಾರಕ್ಕೆ ಬಲಿಯಾಗಬೇಡಿ:
ಜೆಎಸ್‌ಎಸ್ ಪ್ರೌಡಶಾಲೆ ಶಿಕ್ಷಕ ಬಿ. ಸಿದ್ದಲಿಂಗಸ್ವಾಮಿ ಮಾತನಾಡಿ, ಮೂಲ ಸೌಲಭ್ಯಗಳನ್ನು ಹೊಂದಿರುವ ಹಳ್ಳಿಗಳು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಎತ್ತರಕ್ಕೆ ಏರಬೇಕು. ಗ್ರಾಮಾಂತರ ಭಾಗದ ಜನತೆ ನೆಮ್ಮದಿ ಮತ್ತು ಶಾಂತಿ ಬಯಸುವವರು. ಅವರು ಮನಸ್ಸೂ ನಿರ್ಮಲವಾಗಿರುತ್ತದೆ. ಆದರೆ ಇಂದಿನ ರಾಜಕೀಯ ಪರಿಸ್ಥಿತಿಗಳು ಅವರ ಮನವನ್ನೂ ಕಲುಷಿತಗೊಳಿಸಲು ಸದಾ ಹುನ್ನಾರ ಮಾಡುತ್ತಿರುತ್ತವೆ. ಇದಕ್ಕೆ ಯಾರೂ ಬಲಿಯಾಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತಿ ಮೂಡಿಸಿಕೊಂಡು ನಮ್ಮ ನಮ್ಮ ಸಮಗ್ರ ಅಭಿವೃದ್ಧಿಯನ್ನು ನಾವೇ ಕಂಡುಕೊಳ್ಳ್ಳಬೇಕಿದೆ ಎಂದರು. ನಾವು ಯಾವುದೇ ಕಾರಣಕ್ಕೂ ಸರ್ಕಾರದ ಸವಲತ್ತುಗಳು ಮತ್ತು ಇನ್ನೊಬ್ಬರ ನೆರವನ್ನು ಅವಲಂಬನೆ ಮಾಡಬಾರದು. ಆರ್ಥಿಕತೆಗೆ ಅನುಕೂಲವಾಗುವಂತೆ ಉತ್ತಮ ಯೋಜನೆಯನ್ನು ನಾವೇ ರೂಪಿಸಿಕೊಂಡು, ಸ್ವಾವಲಂಬಿಯಾಗಿ ಜೀವನದಲ್ಲಿ ಸಾರ್ಥಕತೆ ಕಾಣಬೇಕಿದೆ ಎಂದು ಸಿದ್ದಲಿಂಗಸ್ವಾಮಿ ಹೇಳಿದರು.
ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಮನುಷ್ಯ ತಾನು ಮಾಡುವ ಕೆಲಸವನ್ನು ತಪ್ತಿಕರವಾಗಿ ಮಾಡಬೇಕು. ಯಾವುದೇ ಕಾಯಕವಾದರೂ, ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಮೊದಲು ಅದಕ್ಕೆ ಗೌರವ ಕೊಡಬೇಕು. ಕಾಯಕ ಸಂಸ್ಕೃತಿಯೇ ಪ್ರಧಾನವಾಗಬೇಕು ಎಂದು ಅವರು ಸಲಹೆ ನೀಡಿದರು.
ನಿವೃತ್ತ ಶಿಕ್ಷಕ ಮೈಸೂರು ರವೀಶ ಕುಮಾರ, ಬಸವ ಬಳಗ ಒಕ್ಕೂಟದ ಅಧ್ಯಕ್ಷ ಎಂ ಪ್ರದೀಪ್ ಕುಮಾರ, ಛಾಯಾಗ್ರಾಹಕ ಪ್ರಭಾಕರ, ದಾಸೋಹ ದಾನಿಗಳಾದ ಮೇಘನಾ ಶಿವಣ್ಣ, ವಿಶಾಲಾಕ್ಷಿ ಮೈಸೂರು ,ನವನೀತ ಶಿವಪ್ರಕಾಶ, ಅನ್ನಪೂರ್ಣಾ ಗುಂಡ್ಲುಪೇಟೆ, ರೇಖಾ ಮಧುಕರ, ಸಿಂಧೂ ಅರಸ್ ಹಾಜರಿದ್ದರು.ನಂತರ ನೂರಾರು ಭಕ್ತರಿಗೆ ದಾಸೋಹ ನೆರವೇರಿತು.