

ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇಂದ್ರಜಿತ್ ಲಂಕೇಶ್ ಮತ್ತು ಪ್ರಶಾಂತ್ ಸಂಬರಗಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಕಿಡಿ ಕಾರಿದ್ದಾರೆ.
‘ಅಷ್ಟಕ್ಕೂ ಈ ಪ್ರಶಾಂತ್ ಸಂಬರಗಿ ಯಾರು, ಅವರಿಗೂ ಸ್ಯಾಂಡಲ್ವುಡ್ಗೂ ಏನು ಸಂಬಂಧ. ಅವರನ್ನು ಚಿತ್ರೋದ್ಯಮಿ ಎಂದು ಕರೆಯಲೇಬೇಡಿ. ಹಾಗೇ ಕರೆಯುವುದಕ್ಕೆ ಅವರೇನು ಸಿನಿಮಾ ನಿರ್ಮಾಣ ಮಾಡಿದ್ದಾರೆಯೇ, ಅಥವಾ ಹಂಚಿಕೆ, ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆಯೇ. ಅವರೊಬ್ಬ ಸಾಮಾಜಿಕ ಹೋರಾಟಗಾರ ಹಾಗೇಯೇ ಕರೆಯಿರಿ. ಸಿನಿಮಾಕ್ಕೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
‘ಸ್ಯಾಂಡಲ್ವುಡ್ನಲ್ಲಿನ ಡ್ರಗ್ಸ್ ಇದೆ ಎಂದು ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಅವರ ಆರೋಪ ಸಾಬೀತಾಗದಿದ್ದರೆ ಇಂದ್ರಜಿತ್ ಮತ್ತು ಪ್ರಶಾಂತ್ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಏನೇ ಹೇಳಿಕೆ ನೀಡುವುದಿದ್ದರು ವಾಣಿಜ್ಯ ಮಂಡಳಿ ಗಮನಕ್ಕೆ ತರಲಿ. ಆದರೆ, ಅದ್ಯಾವುದನ್ನು ಮಾಡದೇ ನೇರವಾಗಿ ಆರೋಪ ಮಾಡುವುದು ತಪ್ಪು ಎಂದಿದ್ದಾರೆ.
‘ನೇರವಾಗಿ ಸ್ಯಾಂಡಲ್ವುಡ್ ಎಂದು ಪ್ರಸ್ತಾಪಿಸುವುದರ ಬದಲು, ಸ್ಯಾಂಡಲ್ವುಡ್ನಲ್ಲಿ ಯಾರು ಎಂಬ ಹೆಸರನ್ನು ಹೇಳಿ. ಅದರ ಬದಲಿಗೆ ಇಡೀ ಸ್ಯಾಂಡಲ್ವುಡ್ ಅನ್ನೇ ಪ್ರಸ್ತಾಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶಾಂತ್ ಸಂಬರಗಿ ಮತ್ತು ಇಂದ್ರಜಿತ್ ಲಂಕೇಶ್ ವಿರುದ್ಧ ಸುದ್ದಿಗೋಷ್ಟಿಯಲ್ಲಿ ಕಿಡಿ ಕಾರಿದ್ದಾರೆ.