'ಸಪ್ತ ಸಾಗರದಾಚೆ ಎಲ್ಲೋ'; ಈ ಭಾಷೆಯಲ್ಲಿ ರಿಲೀಸ್​ ಆಗಲ್ಲ ಸೈಡ್​ ಬಿ!

Untitled design - 2023-10-20T162622.199
Published on

ಬೆಂಗಳೂರು: ಸ್ಯಾಂಡಲ್‌ವುಡ್​ನ ಸಿಂಪಲ್​ ಸ್ಟಾರ್​, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಚಿತ್ರದ ರಿಲೀಸ್​ ಡೇಟ್​ ಬಗ್ಗೆ ಈ ಹಿಂದಿನಿಂದಲೂ ಒಂದು ಗೊಂದಲ ಸೃಷ್ಟಿಯಾಗಿತ್ತು. ಈ ಗೊಂದಲ ಕುರಿತಂತೆ ಇತ್ತೀಚೆಗಷ್ಟೆ ಚಿತ್ರತಂಡ ಅಧಿಕೃತ ರಿಲೀಸ್​ ದಿನಾಂಕ ಘೋಷಿಸುವ ಮುಖೇನ ತೆರೆ ಎಳೆಯಿತು. ಸದ್ಯ ಇದರ ಬೆನ್ನಲ್ಲೇ ಮತ್ತೊಂದು ಕುತೂಹಲಕಾರಿ ಸಂಗತಿಯೊಂದನ್ನು ಚಿತ್ರ ತಯಾರಕರು ಘೋಷಿಸಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜತೆಗೆ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಇದರ ಮುಂದುವರಿದ ಭಾಗವಾದ ಸೈಡ್​ ಬಿ ರಿಲೀಸ್​ಗಾಗಿ ಸಿನಿಪ್ರಿಯರು ಹಾಗೂ ರಕ್ಷಿತ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಘೋಷಿಸಿರುವಂತೆ ಸಿನಿಮಾ ಇದೇ ನವೆಂಬರ್ 17 ರಂದು ಬಹುತೇಕ ಥಿಯೇಟರ್​ಗಳಲ್ಲಿ ರಿಲೀಸ್​ಗೆ ಸಜ್ಜಾಗಿದೆ.

ಪ್ಯಾನ್​ ಇಂಡಿಯಾ ಚಿತ್ರವಾಗಿ ಬದಲಾದ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್​ ಬಿ ಸೀಕ್ವೆಲ್ ಹಿಂದಿ ಹೊರತುಪಡಿಸಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮೂಡಿಬರುವುದು ಖಚಿತವಾಗಿದೆ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸೈಡ್​​ ಬಿ ಬಿಡುಗಡೆಗೊಂಡಾಗ ಹಿಂದಿಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ, ಚೈತ್ರ ಜೆ.ಆಚಾರ್, ರುಕ್ಮಿಣಿ ವಸಂತ್, ಶರತ್​ ಲೋಹಿತಾಶ್ವ ಸೇರಿದಂತೆ ಮುಂತಾದವರ ತಾರಾಗಣವಿದೆ. ಪರಂವಾ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net