

ಬೆಂಗಳೂರು: ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್, ಚೈತ್ರಾ ಜೆ.ಆಚಾರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಚಿತ್ರದ ಟೀಸರ್ ಇಂದು ಅಧಿಕೃತವಾಗಿ ಪರಂವಾ ಸ್ಟುಡಿಯೋಸ್ನಲ್ಲಿ ಬಿಡುಗಡೆಗೊಂಡಿದೆ.
ಈ ಹಿಂದೆ ಸೆ.01 ರಂದು ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಸಿನಿಮಾ ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತು. ಕನ್ನಡದಲ್ಲಿ ಹಿಟ್ ಆದ ನಂತರದಲ್ಲಿ ತೆಲುಗು ಆವೃತ್ತಿಯಲ್ಲಿ 'ಸಪ್ತ ಸಾಗರಾಲೂ ದಾಟಿ' ಎಂಬ ಟೈಟಲ್ನಡಿ ಬಿಡುಗಡೆಗೊಂಡು ತೆಲುಗು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಸೈ ಎನಿಸಿಕೊಂಡಿತು.
ಈ ಹಿಂದಿನಿಂದಲೂ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ರಿಲೀಸ್ ಡೇಟ್ ಬಗ್ಗೆ ಭಾರೀ ಗೊಂದಲ ಮೂಡಿತ್ತು. ಈ ಕುರಿತಂತೆ ಚಿತ್ರತಂಡ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿ ನಿಮ್ಮೆಲ್ಲರ ಮುಂದೆ ನವೆಂಬರ್ 17 ರಂದು ಹಾಜರಾಗಲಿದೆ ಎಂದು ಖಚಿತಪಡಿಸಿತು. ಇದೀಗ ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾದ ಸೈಡ್ ಬಿ ಟೀಸರ್ ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದೆ.
ಸಿನಿಮಾ ಟ್ರೇಲರ್ಗೂ ಮುನ್ನ ಟೀಸರ್ ಅನಾವರಣಗೊಂಡಿದ್ದು, ಕಥೆಯಲ್ಲಿರುವ ಮನು ಜೈಲಿನಿಂದ ಹೊರಬಂದ ಮೇಲೆ ನಡೆಯುವುದೇನು? ಚಿತ್ರದ ಎರಡನೇ ನಾಯಕಿ ಚೈತ್ರಾ ಜೆ.ಆಚಾರ್ ಪಾತ್ರ ಮಾಡಲಿರುವ ಮೋಡಿ ಏನು? ಎಂಬುದನ್ನು ಸಿನಿಮಾ ತೆರೆ ಮೇಲೆ ಬಂದ ನಂತರ ನೋಡಿ ತಿಳಿಯಬೇಕಿದೆ.