ಸಂಕ್ರಾಂತಿ ಶ್ರಮದ ಪ್ರತಿಫಲ ಕಾಣುವ ದಿನ

suggi sambrama
ಶಿವಮೊಗ್ಗ ಕುವೆಂಪು ಶತಮಾನೋತ್ಸವ ಕಾಲೇಜಿನಲ್ಲಿ ಸಂಕ್ರಾಂತಿ ಅಂಗವಾಗಿ ಸುಗ್ಗಿ ಸಂಭ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಕಾಲೇಜು ಆವರಣವನ್ನು ಸಾಂಸ್ಕೃತಿಕವಾಗಿ ಸಿಂಗರಿಸಿದ್ದರು. ವಿದ್ಯಾರ್ಥಿನಿಯರು ಧಾನ್ಯಗಳಿಗೆ ಪೂಜೆ ಸಲ್ಲಿಸಿದರು.
Published on

ಶಿವಮೊಗ್ಗ: ವಿದ್ಯೆಯ ಜ್ಞಾನಜ್ಯೋತಿಯ ಜತೆಗೆ ಸಂಸ್ಕೃತಿಯ ಜ್ಯೋತಿಯನ್ನೂ ಎಲ್ಲೆಡೆ ಪಸರಿಸಬೇಕು. ಶಿಕ್ಷಣ ಎಲ್ಲೆಡೆ ಪಸರಿಸುವ ಕೆಲಸವಾಗಬೇಕು. ಮುಂದಿನ ಪೀಳಿಗೆಗೆ ಈ ಸಂಪ್ರದಾಯವನ್ನು ದಾಟಿಸಬೇಕು ಎಂದು ನಗರ ಪಾಲಿಕೆ ಸಹಾಯಕ ನಿರ್ದೇಶಕಿ (ಸಾಂಖ್ಯಿಕ) ಕೆ.ಆರ್.ಸುಪ್ರಿಯಾ ಹೇಳಿದರು.

ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸುಗ್ಗಿ ಸಂಭ್ರಮ ಮತ್ತು ದೀಪದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಕ್ರಾತಿ ಎನ್ನುವುದು ಸಂತೋಷದ ಕ್ರಾಂತಿ. ಸಂಕ್ರಾಂತಿಯಂದು ನವೋದಯದ ಕಿರಣಗಳು ಉದಯಿಸುವುದರ ಮೂಲಕ ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ರೈತರ ಶ್ರಮದ ಪ್ರತಿಫಲ ಕಾಣುವ ದಿನವಿದು ಎಂದು ಅಭಿಪ್ರಾಯಪಟ್ಟರು.

ಒಳ್ಳೆಯ ಸಮಾಜವನ್ನು ಕಟ್ಟಿ, ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಬೇಕು. ಸಂಸ್ಕೃತಿಯನ್ನು ಮುಂದುವರಿಸುವಲ್ಲಿ ಅನೇಕರ ಶ್ರಮವಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಮಹಿಳಾ ಪ್ರತಿನಿಧಿ ಶ್ರೀರಂಜನಿ ದತ್ತಾತ್ರಿ ಮಾತನಾಡಿ, ಇವತ್ತು ನಮ್ಮ ಹೊಟ್ಟೆ ತುಂಬುತ್ತಿರುವುದು ಈ ಮಣ್ಣಿನಲ್ಲಿ ಬೆಳೆದ ಆಹಾರದಿಂದ. ಗಗನಕ್ಕೇರುತ್ತಿರುವ ಎಲ್ಲ ವಸ್ತುಗಳ ಬೆಲೆಯನ್ನು ಚಿತ್ತದಲ್ಲಿಟ್ಟಿಕೊಂಡು ನಾವು ಯೋಚಿಸಬೇಕು. ಆಹಾರದ ಕೊರತೆ ತಿಳಿದುಕೊಳ್ಳುವ ಬದ್ಧತೆ ಇರಬೇಕು ಎಂದರು.

ಪ್ರಸ್ತುತ ಹಬ್ಬದ ಸಂಭ್ರಮದಿಂದ ಯುವಜನರು ವಿಮುಖರಾಗುತ್ತಿದ್ದಾರೆ. ಜಿಲ್ಲಾ ಒಕ್ಕಲಿಗರ ಸಂಘವು ಆತ್ಮ ನಿರ್ಭಯತೆಯ ಪಾಠ ಕಲಿಸಿಕೊಡುತ್ತಿದೆ. ಮಕ್ಕಳು ಪುಸ್ತಕಗಳನ್ನು ಓದಬೇಕು. ಅಧ್ಯಯನಶೀಲರಾಗಬೇಕು. ಜಿಲ್ಲಾ ಒಕ್ಕಲಿಗರ ಸಂಘ ಮತ್ತಷ್ಟು ಪ್ರವರ್ಧಮಾನಕ್ಕೆ ಬರಬೇಕು ಎಂದು ಹೇಳಿದರು.

ನಗರ ಪಾಲಿಕೆಯ ಪ್ರತಿಪಕ್ಷ ಮಾಜಿ ನಾಯಕಿ ಯಮುನಾ ರಂಗೇಗೌಡ ಮಾತನಾಡಿ, ನಮ್ಮ ಸಂಪ್ರದಾಯ, ಆಚರಣೆಗಳ ಪಾಲನೆ ಕ್ರಮೇಣ ಕಡಿಮೆಯಾಗುತ್ತಿವೆ. ಇಲ್ಲಿ ಬಹಳ ಸಂಭ್ರಮದಿಂದ ಸುಗ್ಗಿ ಸಂಭ್ರಮಾಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.

ಸಂಕ್ರಾಂತಿ ದಿನದಂದು ಮನೆ ಮನೆಗೆ ಎಳ್ಳು-ಬೆಲ್ಲ ಬೀರುವ ಆಚರಣೆಗಳು ಕಡಿಮೆಯಾಗುತ್ತಿವೆ. ಈಗಿನ ಮಕ್ಕಳನ್ನು ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ನಮ್ಮ ಸಂಪ್ರದಾಯ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಹಬ್ಬಗಳು ಒಂದೇ. ಆದರೆ ಆಚರಣೆಗಳು ಬೇರೆ ಬೇರೆ. ಮುಂದಿನ ಪೀಳಿಗೆಗೆ ಸಂಪ್ರದಾಯ ಪರಿಚಯಿಸಬೇಕು ಎಂದು ತಿಳಿಸಿದರು.

ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಮಧು, ಶಿವಮೊಗ್ಗ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸುರೇಶ್, ಪ್ರಮುಖರಾದ ಜೆ.ಸಿ.ಪದ್ಮನಾಭ್, ಕೆ.ಪಿ.ನಾಗರಾಜ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net