

ಬೆಂಗಳೂರು : ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ ‘ಕೆಡಿ- ದ ಡೆವಿಲ್’. ಕೆವಿಎನ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. 1970ರಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯಾಧಾರಿತ ಕಥೆಯಿದು. ಆ ಸಮಯದಲ್ಲಿ ಜೈಲಿನಿಂದ ಬಿಡುಗಡೆಯಾದ ಗ್ಯಾಂಗ್‌ಸ್ಟರ್ ಒಬ್ಬ ಇನ್ನೊಂದು ಗ್ಯಾಂಗ್‌ನ ವಿರುದ್ಧ ಸಮರ ಸಾರಿದ್ದ ಘಟನೆ ಆಧರಿಸಿ ಕಥೆ ಹೆಣೆದಿದ್ದಾರೆ ನಿರ್ದೇಶಕ ಪ್ರೇಮ್. ‘ಕೆಜಿಎಫ್-2’ನಲ್ಲಿ ಅಧೀರನಾಗಿ ಮಿಂಚಿದ್ದ ಸಂಜಯ್ ದತ್ ‘ಕೆಡಿ- ದ ಡೆವಿಲ್’ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ಸೋಮವಾರ 65ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಂಜಯ್‌ಗೆ ‘ಕೆಡಿ’ ಚಿತ್ರತಂಡ ಅವರು ನಟಿಸುತ್ತಿರುವ ‘ಧಕ್ ದೇವ’ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭಾಶಯ ಕೋರಿದೆ.
ಯಾರು ಈ ‘ಧಕ್ ದೇವ’?: ‘ಕೆಡಿ- ದ ಡೆವಿಲ್’ ಪೋಸ್ಟರ್‌ನಲ್ಲಿ ಅಮೆರಿಕ ಮೂಲದ ಪ್ರತಿಷ್ಠಿತ ಪ್ಲೈಮೌತ್ ಕಾರಿನ ಮುಂದೆ ನಿಂತಿರುವ ಧಕ್ ದೇವ ಸಂಜಯ್ ದತ್, ಚಿರತೆ ಡಿಸೈನ್ ಅಂಗಿಯ ಮೇಲೆ ಜೀನ್ಸ್ ಜಾಕೆಟ್ ಧರಿಸಿದ್ದು, ಲುಂಗಿ ತರಹದ ಪ್ಯಾಂಟ್ ಹಾಕಿದ್ದಾರೆ. ಹಣೆಗೆ ತಿಲಕ, ಕೂಲಿಂಗ್ ಗ್ಲಾಸ್ ತೊಟ್ಟು, ಕೊರಳಿಗೆ ಪೊಲೀಸ್ ಬೆಲ್ಟ್, ಪೊಲೀಸ್ ಟೋಪಿ ಜತೆ ಲಾಠಿ ಹಿಡಿದು ವಿಚಿತ್ರ ಲುಕ್‌ನಲ್ಲಿ, ಈ ಧಕ್ ದೇವ ಪೊಲೀಸಾ? ಅಥವಾ ಪೋಲಿನಾ? ಎಂಬ ಅನುಮಾನ ಮೂಡಿಸಿದ್ದಾರೆ.
ಬಹುತಾರಾಗಣದ ಸಿನಿಮಾ: ಬಹುವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಕೆಡಿ- ದ ಡೆವಿಲ್’ನಲ್ಲಿ ಬಾಲಿವುಡ್ ಹಾಗೂ ಕನ್ನಡದ ಹಲವು ತಾರೆಯರಿದ್ದಾರೆ. ಧ್ರುವ ಸರ್ಜಾ, ಸಂಜಯ್ ದತ್ ಸೇರಿದಂತೆ ಶಿಲ್ಪಾ ಶೆಟ್ಟಿ, ನೋರಾ ಫತೇಹಿ, ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಶು ಸೇನ್‌ಗುಪ್ತ ಸೇರಿ ಹಲವರು ತಾರಾಗಣದಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಸ್ಟಾರ್‌ಗಳಿರುವ ಸಿನಿಮಾಗಳು ಬಂದಿರಲಿಲ್ಲ. ಹೀಗಾಗಿ ‘ಕೆಡಿ’ ಬಗ್ಗೆ ಪ್ಯಾನ್ ಇಂಡಿಯಾ ನಿರೀಕ್ಷೆ ಹೆಚ್ಚಿದೆ.
ದತ್ ಮುಂದಿನ ಸಿನಿಮಾ: 65ನೇ ಹುಟ್ಟಹಬ್ಬ ಆಚರಿಸಿಕೊಂಡಿರುವ ಸಂಜಯ್ ಕನ್ನಡ, ಹಿಂದಿ, ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಕೆಡಿ’ ಜತೆ ಅವರ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ತೆಲುಗಿನಲ್ಲಿ ‘ಡಬಲ್ ಇಸ್ಮಾರ್ಟ್’, ಬಾಲಿವುಡ್‌ನ ‘ಹೌಸ್‌ಫುಲ್ 5’, ‘ಘುಡ್‌ಚಡಿ’, ‘ಹೇರಾ ಫೇರಿ 3’, ‘ಜೈಲ್’, ‘ಸನ್ ಆಫ್ ಸರ್ದಾರ್ 2 ಹಾಗೂ ಇನ್ನೂ ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ.