ಡೆವಿಲ್ ಜತೆ ದತ್!; ಧ್ರುವ ಸರ್ಜಾ ಮತ್ತು ಪ್ರೇಮ್ ಜತೆಗೆ ಸಂಜಯ್ ದತ್

Dath
Published on

ಬೆಂಗಳೂರು: ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಾಯಕನಾಗಿರುವ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ - ದಿ ಡೆವಿಲ್’. 1970ರ ದಶಕದಲ್ಲಿ ನಡೆದ ನೈಜ ರೌಡಿಸಂ ಕಥೆಗೆ ನಿರ್ದೇಶಕ ಪ್ರೇಮ್ ಸಿನಿಮಾ ರೂಪ ನೀಡಲಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಕಳೆದ ಒಂದು ವಾರದಿಂದ 2ನೇ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಬಾಲಿವುಡ್ ನಟ ಸಂಜಯ್ ದತ್ ಕೂಡ ಭಾಗಿಯಾಗಿದ್ದಾರೆ. ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಅವರು ‘ಕೆಡಿ’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಚಿತ್ರೀಕರಣಕ್ಕಾಗಿ 70ರ ದಶಕದ ಬೆಂಗಳೂರನ್ನು ಹೋಲುವ ಬೃಹತ್ ಸೆಟ್​ಗಳನ್ನು ನಿರ್ವಿುಸಲಾಗಿದ್ದು, ಚಿತ್ರದ ಕಲಾವಿದರು ಸಹ ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಡಿ ಆಲಿಯಾಸ್ ಕಾಳಿದಾಸ ಪಾತ್ರದಲ್ಲಿ ನಾಯಕ ಧ್ರುವ ಸರ್ಜಾ ನಟಿಸುತ್ತಿದ್ದು, ರವಿಚಂದ್ರನ್ ಅಣ್ಣಯ್ಯಪ್ಪ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಸಂಜಯ್ ದತ್ ಪಾತ್ರವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದ್ದು, ಕೆಲವೇ ದಿನಗಳಲ್ಲಿ ಅವರ ಲುಕ್ ಬಿಡುಗಡೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು, ಮೈಸೂರಿನಲ್ಲಿ ನಡೆಯಲಿದೆ. ಕೆಲವು ದಿನಗಳ ಹಿಂದಷ್ಟೇ ಎ.ಪಿ. ಅರ್ಜುನ್ ನಿರ್ದೇಶಿಸುತ್ತಿರುವ ‘ಮಾರ್ಟಿನ್’ ಚಿತ್ರೀಕರಣ ಪೂರ್ಣಗೊಳಿಸಿದ ಧ್ರುವ ಸರ್ಜಾ, ‘ಕೆಡಿ’ ಚಿತ್ರಕ್ಕಾಗಿ ಕೇವಲ 30 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ದಕ್ಷಿಣದಲ್ಲಿ ಬಿಜಿಯಾದ ಅಧೀರ: ‘ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿ ಅಧೀರ ಪಾತ್ರದಲ್ಲಿ ಮಿಂಚಿದ ಬಳಿಕ ಸಂಜಯ್ ದತ್ ಅವರಿಗೆ ದಕ್ಷಿಣದಲ್ಲಿ ಬೇಡಿಕೆ ಹೆಚ್ಚಾಗಿದೆ. ಸದ್ಯ ಕನ್ನಡದ ‘ಕೆಡಿ’ ಚಿತ್ರದಲ್ಲಿ ನಟಿಸುತ್ತಿರುವ ಅವರು, ತಮಿಳು ನಟ ವಿಜಯ್ ನಟಿಸಲಿರುವ, ಲೋಕೇಶ್ ಕನಕರಾಜ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ. ಲೋಕೇಶ್ ಹೇಳಿದ ಒನ್​ಲೈನ್ ಕೇಳಿಯೇ ಥ್ರಿಲ್ ಆಗಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net