ಮೋದಿ, ಟ್ರಂಪ್‌ಗೆ ಸಂಜಯ್ ದತ್ ‘ಮುನ್ನಾಭಾಯ್’ ಸ್ಟೈಲ್ ಟಾಂಗ್; ‘ದೇಶದಲ್ಲಿ ಈಗ ಶಾಂತಿ ಇಲ್ಲ’ ಎಂದ ನಟ | Sanjay Dutt Munna Bhai

ನಟ ಸಂಜಯ್ ದತ್ ಕಾರ್ಯಕ್ರಮವೊಂದರಲ್ಲಿ ತಮ್ಮ ಫೇಮಸ್‌ ‘ಮುನ್ನಾಭಾಯ್’ ಸ್ಟೈಲ್‌ನಲ್ಲಿ ರಾಜಕೀಯ ವಿಚಾರಗಳ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ದೇಶದಲ್ಲಿ ಈಗ ಮೊದಲಿನಂತೆ ಶಾಂತಿ ಇಲ್ಲ ಎಂದು ಹೇಳಿದ ಅವರು, ಪ್ರಧಾನಿ ಮೋದಿ, ಮಹಾತ್ಮ ಗಾಂಧೀಜಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ತಮ್ಮದೇ ಶೈಲಿಯಲ್ಲಿ ಮಾತನಾಡಿದ್ದಾರೆ.
Sanjay Dutt takes a dig at Modi,  Trump.
ಮುನ್ನಾಭಾಯ್ ಸ್ಟೈಲ್‌ನಲ್ಲಿ ರಾಜಕೀಯ ವ್ಯಂಗ್ಯ ಮಾಡಿದ ಸಂಜಯ್ ದತ್
Published on: 

Sanjay Dutt: ಬಾಲಿವುಡ್ ನಟ ಸಂಜಯ್ ದತ್ ತಮ್ಮ ಫೇಮಸ್‌ ‘ಮುನ್ನಾಭಾಯ್’ ಲುಕ್‌ನಲ್ಲೇ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ. ಐದು ನಿಮಿಷ ತಾವೇ ಪ್ರಧಾನಿ ಆಗಿದ್ದರೆ ಏನೆಲ್ಲಾ ಮಾಡ್ತಿದ್ದೆ ಅನ್ನೋದನ್ನ ತಮ್ಮದೇ ಮುನ್ನಾಭಾಯ್ ಸ್ಟೈಲ್‌ನಲ್ಲಿ ಹೇಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಗಾಂಧಿ ಜಯಂತಿ ಸ್ಪೆಷಲ್ ಎಪಿಸೋಡ್‌ನಲ್ಲಿ ಸಂಜಯ್ ದತ್ ಮಹಾತ್ಮ ಗಾಂಧೀಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಾರಗಳನ್ನು ತಮ್ಮದೇ ಸ್ಟೈಲ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ‘ಮುನ್ನಾಭಾಯ್’ ಪಾತ್ರದ ಮ್ಯಾನರಿಸಂನಲ್ಲೇ ಮಾತನಾಡುತ್ತಾ ಹಲವು ರಾಜಕೀಯ ವಿಚಾರಗಳ ಬಗ್ಗೆ ಹಾಸ್ಯಭರಿತವಾಗಿ ಟಾಂಗ್ ಕೊಟ್ಟಿದ್ದಾರೆ.

ನಮ್ಮ ದೇಶದಲ್ಲಿ ಈಗ ಶಾಂತಿ ಇಲ್ಲ

ಕಾರ್ಯಕ್ರಮದಲ್ಲಿ ದೇಶದ ಪರಿಸ್ಥಿತಿ ಬಗ್ಗೆ ಮಾತನಾಡಿದ ಸಂಜಯ್ ದತ್, ಭಾರತದ ಜನ ತುಂಬಾ ಒಳ್ಳೆಯವರು ಹಾಗೂ ವಿಶಾಲ ಮನಸ್ಸಿನವರು ಎಂದು ಹೇಳಿದ್ದಾರೆ. ಆದ್ರೆ ದೇಶದಲ್ಲಿ ಹಿಂದೆ ಇದ್ದಂತಹ ಶಾಂತಿಯ ವಾತಾವರಣ ಈಗ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ನಮ್ಮ ದೇಶದಲ್ಲಿ ಶಾಂತಿ ಇರಬೇಕು. ಆದ್ರೆ ಈಗ ಆ ಶಾಂತಿ ನನಗೆ ಅನಿಸುತ್ತಿಲ್ಲ. ಹಿಂದೆ ಇದ್ದ ಆ ದಿನಗಳು ಮತ್ತೆ ಬರಲಿ ಅಂತ ಶಿವಜಿಗೆ ಪ್ರಾರ್ಥಿಸುತ್ತೇನೆ’ ಎಂದು ಸಂಜಯ್ ದತ್ ಹೇಳಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ಪರೋಕ್ಷ ಟಾಂಗ್

ಐದು ನಿಮಿಷ ಪ್ರಧಾನಿ ಆಗೋ ಅವಕಾಶ ಸಿಕ್ಕರೆ ಜನರಿಗೆ ಏನು ಹೇಳ್ತೀರಾ ಎಂದು ಕೇಳಿದಾಗ, ಸಂಜಯ್ ದತ್ ತಕ್ಷಣವೇ ತಮ್ಮ ‘ಮುನ್ನಾಭಾಯ್’ ಅವತಾರಕ್ಕೆ ಜಾರಿದ್ದಾರೆ. ಪ್ರಧಾನಿ ಆಗಿದ್ದ ಖುಷಿಯನ್ನು ಆಚರಿಸೋಕೆ ವಿದೇಶಕ್ಕೆ ಹೋಗಲ್ಲ. ಜನರ ಜೊತೆಯಲ್ಲೇ ಇರ್ತೀನಿ. ಆಗ ಮಾತ್ರ ಪ್ರಧಾನಿ ಮತ್ತು ಜನರ ನಡುವೆ ಒಳ್ಳೆಯ ಕನೆಕ್ಷನ್ ಇರುತ್ತೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಾರ್ವಜನಿಕ ಹಾಗೂ ಸರ್ಕಾರಿ ಸ್ಥಳಗಳಲ್ಲಿ ರಾಜಕೀಯ ನಾಯಕರ ಫೋಟೋಗಳನ್ನು ಹೆಚ್ಚಾಗಿ ಹಾಕುವ ವಿಚಾರಕ್ಕೂ ಸಂಜಯ್ ದತ್ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದಾರೆ. “ದೇಶದ ಫೋಟೋ ಕಾಣಬೇಕು” ಎಂದು ಹೇಳಿದ ಅವರು, ತಮ್ಮ ಫೋಟೋ ಹಾಕಬೇಕೆನಿಸುವ ಜಾಗದಲ್ಲಿ ಮಹಾತ್ಮ ಗಾಂಧೀಜಿ ಫೋಟೋ ಹಾಕ್ತೀನಿ ಎಂದು ಹೇಳಿದ್ದಾರೆ.

ಗಾಂಧೀಜಿಯ ಮೂರು ಕೋತಿಗಳಿಗೆ ‘ನಾಲ್ಕನೇ ಕೋತಿ’

ಸಂಜಯ್ ದತ್ ತಮ್ಮ ಮಾತಿನಲ್ಲಿ ಮಹಾತ್ಮ ಗಾಂಧೀಜಿಯ ಪ್ರಸಿದ್ಧ ಮೂರು ಕೋತಿಗಳನ್ನೂ ನೆನಪಿಸಿಕೊಂಡಿದ್ದಾರೆ. ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ ಎಂಬ ಸಂದೇಶ ಎಲ್ಲರಿಗೂ ಗೊತ್ತಿದೆ. ಆದ್ರೆ ಇವತ್ತು ಇನ್ನೊಂದು ಕೋತಿ ಬೇಕು ಎಂದು ಅವರು ಹಾಸ್ಯ ಮಾಡಿದ್ದಾರೆ. ‘ಯಾರಾದ್ರೂ ಕೆಟ್ಟದ್ದನ್ನು ನೋಡಿದ್ರೆ ಅದನ್ನ ಸರಿ ಮಾಡೋರು ಯಾರು? ಮೂರು ಕೋತಿಗಳು ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ಕೂತ್ಕೊಂಡ್ರೆ ದೇಶ ಹೇಗೆ ನಡೆಯುತ್ತೆ?’ ಎಂದು ತಮ್ಮ ಮುನ್ನಾಭಾಯ್ ಸ್ಟೈಲ್‌ನಲ್ಲಿ ಪ್ರಶ್ನಿಸಿದ್ದಾರೆ.

ಟ್ರಂಪ್‌ಗೆ ‘ಗಾಂಧಿಗಿರಿ’ ಪಾಠ

ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ‘ಟ್ರಂಪ್ ಮಾಮು’ ಅಂತ ಕರೆದ ಸಂಜಯ್ ದತ್, ಜಗತ್ತಿನಲ್ಲಿ ಶಾಂತಿ ಬೇಕಾದ್ರೆ ‘ಗಾಂಧಿಗಿರಿ’ ಮೊದಲು ಬರಬೇಕು ಎಂದು ಹೇಳಿದ್ದಾರೆ. ಜಗತ್ತಿನಲ್ಲಿ ಈಗಾಗಲೇ ಸಾಕಷ್ಟು ಕ್ಷಿಪಣಿಗಳಿವೆ. ಹೀಗಾಗಿ ಬೆದರಿಕೆಗಳ ಬದಲು ಪ್ರೀತಿ ಮತ್ತು ಮಾತುಕತೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ. ಯಾರಿಗಾದ್ರೂ ಕ್ಷಿಪಣಿ ಕಳುಹಿಸಬೇಕು ಅನ್ನಿಸಿದ್ರೆ ಮೊದಲು ಹೂಗುಚ್ಛ ಕಳುಹಿಸಬೇಕು.

ಪ್ರೀತಿಯ ಅಪ್ಪುಗೆ

ಇನ್ನು, ಯಾರಿಗಾದ್ರೂ ಬೆದರಿಕೆ ಹಾಕಬೇಕು ಅನ್ನಿಸಿದ್ರೆ ಅವರನ್ನ ಮನೆಗೆ ಕರೆದು, ಚಹಾ ಕುಡಿಯುತ್ತಾ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹಾಸ್ಯ ಮಾಡಿದ್ದಾರೆ. ಕೊನೆಯಲ್ಲಿ ತಮ್ಮದೇ ‘ಮುನ್ನಾಭಾಯ್’ ಸ್ಟೈಲ್‌ನಲ್ಲಿ ಅಮೆರಿಕಕ್ಕೆ ಬಂದು ‘ಪ್ರೀತಿಯ ಅಪ್ಪುಗೆ’ ಕೊಡ್ತೀನಿ ಎಂದು ಹೇಳುವ ಮೂಲಕ ತಮ್ಮ ಮಾತಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.

ಇದನ್ನೂ ಓದಿ: ಸೀಟಿಗಾಗಿ ಕಿರಿಕ್​; ಮಾಜಿ ಜಿಲ್ಲಾಧ್ಯಕ್ಷನಿಗೆ ಕಪಾಳಮೋಕ್ಷ! ಸಮಾಜವಾದಿ ಪಕ್ಷದ ಸಭೆಯಲ್ಲಿ ಹೈಡ್ರಾಮಾ | Samajwadi Party

ಸಂಜಯ್ ದತ್ ಅವರ ಈ ಮಾತುಗಳು 2006ರಲ್ಲಿ ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ತೆರೆಕಂಡ ‘ಲಗೆ ರಹೋ ಮುನ್ನಾಭಾಯ್’ ಸಿನಿಮಾದ ‘ಗಾಂಧಿಗಿರಿ’ ಪರಿಕಲ್ಪನೆಯನ್ನು ಮತ್ತೆ ನೆನಪಿಸಿವೆ. ಸಿನಿಮಾದಲ್ಲಿ ಗಾಂಧೀಜಿ ತತ್ವಗಳನ್ನು ತಮ್ಮದೇ ರೀತಿಯಲ್ಲಿ ಅಳವಡಿಸಿಕೊಳ್ಳುವ ಮುನ್ನಾಭಾಯ್, ಸಮಸ್ಯೆಗಳಿಗೆ ಹಿಂಸೆಯ ಬದಲು ಪ್ರೀತಿ ಮತ್ತು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಸಂದೇಶ ನೀಡಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net