ಕನ್ನಡ, ಮಲಯಾಳಂನ ಮೂರು ಸಿನಿಮಾಗಳಲ್ಲಿ ಬಿಜಿಯಾದ ಸಂಜನಾ ದಾಸ್

sanjana doss (3)
Published on

ಬೆಂಗಳೂರು: ಅಪ್ಪಣ್ಣ ಸಂತೋಷ್ ನಿರ್ದೇಶನದ ‘ಮನಸ್ಮಿತ’ ಚಿತ್ರದ ಮೂಲಕ ಚಂದನವನಕ್ಕೆ ಡೆಬ್ಯೂ ಆದವರು ನಟಿ ಸಂಜನಾ ದಾಸ್. ಬಳಿಕ ಅರುಣ್ ನಿರ್ದೇಶನದ ‘ಕೆಟಿಎಂ’ ಚಿತ್ರದಲ್ಲಿ ಅಭಿನಯಿಸಿ ಗಮನಸೆಳೆದರು. ಸದ್ಯ ಮಲಯಾಳಂ, ಕನ್ನಡದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿರುವ ಸಂಜನಾ, ಇತ್ತೀಚೆಗೆ ಬಿಡುಗಡೆಯಾದ ಸಂಜಿತ್ ಹೆಗ್ಡೆ ಅವರ ಅಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಸಿನಿ ಕರಿಯರ್ ಕುರಿತು ವಿಜಯವಾಣಿ ಜತೆ ಮಾತನಾಡಿದ್ದಾರೆ.

ಚಿತ್ರರಂಗ ಪ್ರವೇಶದ ಕುರಿತು ಸಂಜನಾ, ‘ಚಿಕ್ಕಂದಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ಭರತನಾಟ್ಯ ಡಾನ್ಸರ್ ಆದ ಕಾರಣ ಅಭಿನಯದ ಬಗ್ಗೆ ಒಂದಿಷ್ಟು ಕೌಶಲ ಇತ್ತು. ಬಳಿಕ ಹಲವು ಸಿನಿಮಾಗಳಿಗೆ ಆಡಿಷನ್ ನೀಡಿದೆ. ಆದರೆ, ಮೊದಲ ಬಾರಿಗೆ ನಟನೆಗೆ ಅವಕಾಶ ದೊರತಿದ್ದು ‘ಮನಸ್ಮಿತ’ ಚಿತ್ರದಲ್ಲಿ. ಇಲ್ಲಿ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡೆ. ಅಭಿನಯವೂ ಮೆಚ್ಚುಗೆಗೆ ಪಾತ್ರವಾಗಿ ಗುರುತಿಸಿಕೊಳ್ಳಲು ಕಾರಣವಾಯಿತು. ಬಳಿಕ ‘ಕೆಟಿಎಂ’ ಸಿನಿಮಾದಲ್ಲಿ ಮುಖ್ಯಪಾತ್ರಕ್ಕೆ ಅವಕಾಶ ದೊರೆಯಿತು. ಆ ಮೂಲಕ ಒಂದರ ಹಿಂದೆ ಒಂದು ಅವಕಾಶಗಳು ದೊರೆಯುತ್ತಿವೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ಮುಂದಿನ ಸಿನಿಮಾಗಳು:
‘ಕೆಟಿಎಂ’ ಬಳಿಕ ಹಲವು ಸಿನಿಮಾಗಳಲ್ಲಿ ಅವಕಾಶ ಪಡೆದಿರುವ ನಟಿ ಸಂಜನಾ, ಸದ್ಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಸದ್ಯ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಸೆಪ್ಟೆಂಬರ್‌ನಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ. ಇದೊಂದು ವಿಭಿನ್ನ ಲವ್ ಸ್ಟೋರಿಯಾಗಿದ್ದು, ಇಲ್ಲೂ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇದು ಹೊರತುಪಡಿಸಿ ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಲಿದ್ದೇನೆ. ಮಾತುಕತೆ ಮುಗಿದಿದ್ದು, ಮುಂದಿನ ದಿನಗಳಲ್ಲಿ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವೆ’ ಎನ್ನುತ್ತಾರೆ.

ಮಲಯಾಳಂನಲ್ಲೂ ನಟನೆ:
ಕನ್ನಡ ಜತೆಗೆ ಬೇರೆ ಭಾಷೆಗಳಲ್ಲೂ ಅವಕಾಶ ಪಡೆದಿರುವ ಸಂಜನಾ, ‘ಮಲಯಾಳಂನ ‘ಮೂನ್‌ವಾಕ್’, ‘ಆ್ಯಟ್’ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಇವು ಬಿಡುಗಡೆ ಹಂತದಲ್ಲಿವೆ. ತೆಲುಗು, ತಮಿಳು ಸಿನಿಮಾಗಳಿಗೆ ಆಡಿಷನ್, ಲುಕ್ ಟೆಸ್ಟ್ ನೀಡುತ್ತಿದ್ದೇನೆ. ಆಯ್ಕೆಯಾದರೆ ನಟಿಸುವೆ. ಹಾಗೆಯೇ ‘ಪ್ರೈಮ್ ಟೈಮ್ ವಿಥ್ ದ ಮೂರ್ತಿಸ್’ ಎಂಬ ಇಂಗ್ಲೀಷ್ ವೆಬ್ ಸರಣಿಯಲ್ಲಿ ನಟಿಸಿದ್ದೇನೆ. ಕಳೆದ ತಿಂಗಳು ಬಿಡುಗಡೆಯಾಗಿದೆ. ಇನ್ನೂ ಮೂರು ವೆಬ್ ಸರಣಿಗಳಿಗೆ ಅವಕಾಶ ಬಂದಿದ್ದು, ಒಂದನ್ನು ಈಗಾಗಲೇ ಒಪ್ಪಿಕೊಂಡಿದ್ದೇನೆ. ಒಳ್ಳೆಯ ಕಟೆಂಟ್ ಆಧಾರಿತ ವೆಬ್ ಸರಣಿಗಳಲ್ಲೂ ನಟಿಸುವೆ’ ಎನ್ನುತ್ತಾರೆ.

ಅಲ್ಬಂಸಾಂಗ್‌ನಲ್ಲಿ ಕಾಣಿಸಿಕೊಳ್ಳುವೆ
ಗಾಯಕ ಸಂಜಿತ್ ಹೆಗ್ಡೆ ಇತ್ತೀಚೆಗೆ ಹೊರತಂದಿರುವ ‘ನೀ ನಂಗೆ ಅಲ್ಲವೇ’ ಎಂಬ ಶೀರ್ಷಿಕೆಯ ಅಲ್ಬಂ ಸಾಂಗ್‌ನಲ್ಲಿ ಸಂಜನಾ ಕಾಣಿಸಿಕೊಂಡಿದ್ದರು. ಇದು ಬಿಡುಗಡೆಯಾದ ಮೂರೇ ವಾರಕ್ಕೆ ಹೆಚ್ಚು ಜನಪ್ರಿಯಗೊಂಡಿತ್ತು. ಎರಡೂವರೆ ಲಕ್ಷ ಜನ ಈ ಅಲ್ಬಂ ಸಾಂಗ್‌ನ್ನು ವೀಕ್ಷಿಸಿದ್ದಾರೆ. ‘ಇದು ಮೊದಲ ಅಲ್ಬಂ ಸಾಂಗ್ ಆಗಿದ್ದು, ಜನಗಳು ಸ್ವೀಕರಿಸಿರುವುದು ಖುಷಿ ನೀಡಿದೆ. ಸಂಜಿತ್ ನನ್ನ ಸ್ನೇಹಿತ. ಆ ತಂಡದೊಂದಿಗೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಇನ್ನೊಂದು ಅಲ್ಬಂ ಸಾಂಗ್ ಮಾಡುವ ಯೋಚನೆಯಲ್ಲಿದ್ದೇವೆ’ ಎಂದು ಸಂಜನಾ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net