ಅಂದು ಈ ಚಿತ್ರಕ್ಕಾಗಿ ಪೂರ್ವಜರ 36 ಎಕರೆ ಮಾವಿನ ತೋಟ ಮಾರಿದ್ರು ಸಂದೀಪ್ ವಂಗಾ

vanga
Published on

ಮುಂಬೈ: ಇತ್ತೀಚೆಗಷ್ಟೇ ಬಿಡುಗಡೆಯಾದ ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂದೀಪ್ ವಂಗಾ ರೆಡ್ಡಿ ದಕ್ಷಿಣದ ಖ್ಯಾತ ನಿರ್ದೇಶಕರಾಗಿದ್ದು, 'ಅರ್ಜುನ್ ರೆಡ್ಡಿ' ಮೂಲಕ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅರ್ಜುನ್ ರೆಡ್ಡಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸಂದೀಪ್ ರೆಡ್ಡಿ ಅವರು ಈ ಚಿತ್ರವನ್ನು ಮಾಡಲು ಯೋಚಿಸಿದಾಗ, ಚಿತ್ರವನ್ನು ನಿರ್ಮಿಸಲು ಅವರ ಬಳಿ ಸಾಕಷ್ಟು ಬಜೆಟ್ ಇರಲಿಲ್ಲ. ಆದರೆ ಅವರ ಧೈರ್ಯ ಎಷ್ಟಿತ್ತೆಂದರೆ ಎಲ್ಲರೂ ಅವರಿಗೆ ಸಪೋರ್ಟ್ ಮಾಡಿದರು. ಇದು ಅದ್ಭುತ ಚಿತ್ರವಾಗಿ ಹೊರಹೊಮ್ಮಿತು.

ಈ ಚಿತ್ರದ ಬಜೆಟ್‌ಗೆ ಸಂಬಂಧಿಸಿದಂತೆ ಮಾತನಾಡಿರುವ ಸಂದೀಪ್ ವಂಗಾ ರೆಡ್ಡಿ, ಚಿತ್ರಕ್ಕಾಗಿ ಹೇಗೆ ಮತ್ತು ಯಾವ ರೀತಿಯಲ್ಲಿ ಹಣವನ್ನು ಸಂಗ್ರಹಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ರೆಡ್ಡಿಟ್ ಬಳಕೆದಾರರು ಇತ್ತೀಚೆಗೆ ವಂಗಾ ಅವರ ಆ ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಅವರು 36 ಎಕರೆ ಮಾವಿನ ತೋಟವನ್ನು 1.5 ಕೋಟಿಗೆ ಮಾರಾಟ ಮಾಡಿದ ಬಗ್ಗೆ ಹಂಚಿಕೊಂಡಿದ್ದಾರೆ.

ಸಂದೀಪ್ ಅವರು, "ಸಿನಿಮಾ ಮಾಡುವ ಪ್ಲಾನ್ ಮಾಡಿದಾಗ ತಮ್ಮ ಬಳಿ ಹೆಚ್ಚು ಹಣ ಇರಲಿಲ್ಲ. ಕೋಟಿಗಟ್ಟಲೇ ಸಾಲ ಮಾಡಿದೆ. ಆದರೂ ಹಣ ಕಡಿಮೆಯಾಯಿತು. ಚಿತ್ರದ ಚಿತ್ರೀಕರಣಕ್ಕಾಗಿ ಕಚೇರಿ ತೆರೆದಾಗ ಸಾಕಷ್ಟು ಜನ ಆರ್ಥಿಕ ಸಹಾಯ ಮಾಡಿದರು. ಆದರೆ ಹಣ ಸಾಕಾಗಲಿಲ್ಲ. ಕೊನೆಗೆ ನನ್ನ ಪೂರ್ವಿಕರ 36 ಎಕರೆ ಜಮೀನು ಮಾರಿ 1.6 ಕೋಟಿ ರೂ. ಸಂಗ್ರಹಿಸಿದೆ. ನಂತರ ಚಿತ್ರದ ಬಜೆಟ್ ಕಂಪ್ಲೀಟ್ ಆಯಿತು ಎಂದು ತಿಳಿಸಿದ್ದಾರೆ. ಕೊನೆಗೆ ಈ ಚಿತ್ರ ಸೂಪರ್‌ಹಿಟ್ ಆಯಿತು. ಚಿತ್ರದ ಒಟ್ಟು ಬಜೆಟ್ 5.5 ಕೋಟಿಯಾದರೆ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಸಾರ್ವಕಾಲಿಕ ಕಲೆಕ್ಷನ್ 51 ಕೋಟಿ'' ಎಂದು ತಿಳಿಸಿದ್ದಾರೆ.

ಅಂದಹಾಗೆ ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರ ವೃತ್ತಿಜೀವನ ಯಶಸ್ವಿಯಾಯಿತು. ಮಾಸ್ ಹೀರೋ ಆದರು. ಅರ್ಜುನ್ ರೆಡ್ಡಿಯ ದೊಡ್ಡ ಯಶಸ್ಸಿನಿಂದ ಪ್ರೇರಿತರಾದ ಸಂದೀಪ್ ವಂಗಾ ರೆಡ್ಡಿ ಅದರ ಹಿಂದಿ ರಿಮೇಕ್ ಕಬೀರ್ ಸಿಂಗ್ ಅನ್ನು ಮಾಡಿದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಗಳಿಸಿತು. ಕಬೀರ್ ಸಿಂಗ್ ಚಿತ್ರದಲ್ಲಿ ಶಾಹಿದ್ ಕಪೂರ್ ದೇವರಕೊಂಡ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಜೊತೆ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

ಏತನ್ಮಧ್ಯೆ, ಇತ್ತೀಚೆಗೆ ಬಿಡುಗಡೆಯಾದ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರ ವಿಶ್ವದಾದ್ಯಂತ 600 ಕೋಟಿ ಕ್ಲಬ್‌ಗೆ ಪ್ರವೇಶಿಸಲು ಸಿದ್ಧವಾಗಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ ಜಾಗತಿಕವಾಗಿ 563 ಕೋಟಿ ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net