

ಯುಗಾದಿ ಎಂದರೆ ಹೊಸ ಆರಂಭ. ಯುಗಾದಿ ಎಂದರೆ ಸಂತಸ. ಎಲ್ಲೆಡೆಯೂ ಹೊಸ ಬೆಳಕು ಮೂಡುವಾಗ, ಹೂವುಗಳು ಅರಳುವಾಗ, ಮನದಲ್ಲಿ ಹೊಸ ಕನಸುಗಳು ಚಿಗುರುತ್ತವೆ. ಯಾವುದೇ ಹೊಸ ಕೆಲಸವನ್ನು ಶುರು ಮಾಡಲು ಇದೊಂದು ಶುಭ ಸಂದರ್ಭ. ಬಾಳಲ್ಲಿರುವ ಸಿಹಿ, ಕಹಿಯವನ್ನು ಸಮಾನವಾಗಿ ಸ್ವೀಕರಿಸುವ ಪ್ರತೀಕವಾಗಿ ಬೇವು ಮತ್ತು ಬೆಲ್ಲ ಹಂಚುವ ಹಬ್ಬ ಯುಗಾದಿ. ಈ ಹಬ್ಬವನ್ನು ಚಂದನವನದ ತಾರೆಯರು ಸಂಭ್ರಮಿಸುವ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಒಳ್ಳೆಯತನ ತರಲಿ:
ಪ್ರತಿ ವರ್ಷ ಯುಗಾದಿ ಹಬ್ಬಕ್ಕೆ ಅಜ್ಜಿ ಮನೆಗೆ ಹೋಗುತ್ತಿದ್ದೆ. ಈ ಬಾರಿ ಅಲ್ಲಿಗೆ ಹೋಗುತ್ತಿಲ್ಲ. ಯುಗಾದಿ ಹಬ್ಬವನ್ನು ಕುಟುಂಬದವರ ಜತೆ ಸಮಯ ಕಳೆದು ಆಚರಿಸುವುದೇ ಸಡಗರ. ಹೊಸ ಬಟ್ಟೆ ಖರೀದಿ ಮಾಡುವುದು, ಬೇವು, ಬೆಲ್ಲ ಸೇವಿಸುವುದು ಯುಗಾದಿ ಹಬ್ಬದ ರಿವಾಜು. ಬೇವು, ಬೆಲ್ಲ ಹಂಚಲು ಮನೆ ಮನೆಗೆ ಹೋಗುತ್ತಿದ್ದೆವು. ಪಾಯಸ, ಹೋಳಿಗೆ, ಕೋಸಂಬರಿ ಹಬ್ಬದ ಸ್ಪೆಷಲ್ ತಿನಿಸುಗಳು! ಈ ವರ್ಷ ನನ್ನ ಪಾಲಿಗೆ ಬಹಳ ವಿಶೇಷವಾಗಿತ್ತು. ‘ಕೆಟಿಎಂ’ ಸಿನಿಮಾ 25 ದಿನಗಳನ್ನು ಪೂರೈಸಿತು. ಈ ವರ್ಷ ಇನ್ನೂ ಮೂರು ಪ್ರಾಜೆಕ್ಟ್‌ಗಳು ಲೈನಪ್‌ನಲ್ಲಿವೆ. ಹೊಸ ಕನಸಿನ ಜತೆ ಹೊಸ ಪಾಠಗಳನ್ನು ಕಲಿಯಲು ಉತ್ಸುಕಳಾಗಿದ್ದೇನೆ. ಈ ಯುಗಾದಿ ಎಲ್ಲೆಲೂ ಒಳ್ಳೆಯತನ ತರಲಿ.
-ಸಂಜನಾ ದಾಸ್, ನಟಿ
ಹೋಳಿಗೆ ಬೇಕೇ ಬೇಕು!
ಯುಗಾದಿ ಎಂದರೆ ನನಗೆ ಹೋಳಿಗೆ ಬೇಕೇ ಬೇಕು. ಕುಟುಂಬದವರೆಲ್ಲ ಸೇರಿ ಆಚರಿಸುವ ಖುಷಿಯೇ ಬೇರೆ! ನಮಗೆ ಜನವರಿ 1 ಹೊಸ ವರ್ಷ ಅಲ್ಲ. ಯುಗಾದಿಯೇ ಹೊಸ ವರ್ಷ. ಹೊಸ ಬಟ್ಟೆ ಹಾಕಿಕೊಂಡು ಮನೆಯಲ್ಲಿ ಪೂಜೆ ಮಾಡಿ ಒಟ್ಟಿಗೆ ಕುಳಿತು ಊಟ ಮಾಡುವುದು ರೂಢಿ. ಚಿಕ್ಕವರಿದ್ದಾಗ ಬೇವು, ಬೆಲ್ಲ ಹಂಚಲು ಹೋಗುವುದು ಎಂದರೆ ಏನೋ ಖುಷಿ ಆಗುತ್ತಿತ್ತು. ಆದರೆ, ಈ ಬಾರಿ ತಂದೆಗೆ ಅನಾರೋಗ್ಯ ಇರುವ ಕಾರಣ ಅದ್ದೂರಿ ಸಂಭ್ರಮ ಇಲ್ಲ. ಸರಳವಾದ ಪೂಜೆ ಮಾಡುತ್ತೇವೆ.
-ಪ್ರಣತಿ, ನಟಿ
ತಾಳ್ಮೆ ಕಲಿಯಬೇಕು:
ಯುಗಾದಿ ಹಬ್ಬ ಎಂದರೆ ಬೇವು, ಬೆಲ್ಲವೇ ಬಹಳ ಸ್ಪೆಷಲ್. ನಾನೇ ತಯಾರಿ ಮಾಡುತ್ತೇನೆ. ನನ್ನ ತಾಯಿ ಮಾಡುವ ಹೋಳಿಗೆ ಎಂದರೆ ಇಡೀ ಬಿದಿಯಲ್ಲೇ ೇಮಸ್. ಅದನ್ನು ಅಕ್ಕ ಪಕ್ಕದ ಎಲ್ಲ ಮನೆಯವರಿಗೂ ಹೋಗಿ ಹಂಚಬೇಕು. ಹೋಳಿಗೆ ಬೇಕು ಎಂದರೆ ಮೊದಲು ಬೇವು, ಬೆಲ್ಲ ತಿನ್ನಬೇಕು ಎನ್ನುವ ಕಂಡೀಷನ್ ಇದೆ ನಮ್ಮ ಮನೆಯಲ್ಲಿ. ಯುಗಾದಿ ಎನ್ನುವುದು ಹೊಸ ಆರಂಭ ಇದ್ದ ಹಾಗೆ. ಹೀಗಾಗಿ ರೆಸೊಲ್ಯೂಷನ್ ಇಟ್ಟುಕೊಂಡಿದ್ದೇನೆ. ಈ ಬಾರಿ ತಾಳ್ಮೆಯಿಂದ ಮಾತನಾಡುವುದು, ಕೇಳಿಸಿಕೊಳ್ಳುವುದು, ನಿರ್ಣಯ ತೆಗೆದುಕೊಳ್ಳುವುದನ್ನು ಕಲಿಯಬೇಕು ಎಂದುಕೊಂಡಿದ್ದೇನೆ.
-ಹೃತಿಕಾ ಶ್ರೀನಿವಾಸ್, ನಟಿ