ಮನೆ ಬಾಗಿಲಿಗೆ ಮರಳು: ಜನವರಿಯಿಂದ ಪೂರೈಕೆ ಸರಾಗ; ಎಂ ಸ್ಯಾಂಡ್ ಬಳಕೆಗೆ ಉತ್ತೇಜನ..

Front
Published on

ಬೆಂಗಳೂರು: ಮರಳು ಮಾಫಿಯಾ ಬಗ್ಗು ಬಡಿಯಲು ಜಾರಿಗೆ ತಂದಿರುವ ಮರಳು ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಜನವರಿಯಿಂದ ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗುವಂತೆ ಮಾಡಲು ಸರ್ಕಾರ ಮುಂದಾಗಿದೆ. ಜತೆಗೆ, ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಿದೆ. ಮರಳಿನ ಕೊರತೆ ನೀಗಿಸಲು ಎಂ ಸ್ಯಾಂಡ್ ಬಳಕೆ ಹೆಚ್ಚಳಕ್ಕೆ ನೀತಿಗೆ ತಿದ್ದುಪಡಿ ತರುವ ಮಹತ್ವದ ತೀರ್ಮಾನ ಮಾಡಿದೆ.

ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಎಂ ಸ್ಯಾಂಡ್​ಗೆ ಪ್ರೋತ್ಸಾಹ ನೀಡಲು ಅಧಿಕೃತ ಕ್ರಷರ್​ಗಳಿಗೆ ಹೆಚ್ಚಿನ ಉತ್ತೇಜನಕ್ಕೆ ನೀತಿಯಲ್ಲಿ ಗಮನ ಹರಿಸಲಾಗುವುದು. ಮುಂದಿನ ಅಧಿವೇಶನದ ವೇಳೆಗೆ ತಿದ್ದುಪಡಿ ತರಲಾಗುವುದು ಎಂದು ವಿವರಿಸಿದರು. ಎಂ ಸ್ಯಾಂಡ್ ಬಳಕೆ ಪ್ರೋತ್ಸಾಹಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ತಜ್ಞರ ಜತೆ ಚರ್ಚೆ ನಡೆಸಲಾಗುವುದು ಎಂದರು.

ಮರಳಿನ ಕೊರತೆ: ರಾಜ್ಯದಲ್ಲಿ ವರ್ಷಕ್ಕೆ 45 ದಶಲಕ್ಷ ಟನ್ ಮರಳಿನ ಬೇಡಿಕೆ ಇದೆ. ನದಿಗಳಲ್ಲಿ ಅಂದಾಜು 5 ರಿಂದ 6 ದಶಲಕ್ಷ ಟನ್ ಮಾತ್ರ ಲಭ್ಯವಾಗುತ್ತದೆ. ಉಳಿದ ಕೊರತೆಯನ್ನು ಎಂ ಸ್ಯಾಂಡ್ ಮೂಲಕವೇ ತುಂಬಬೇಕಾಗಿದೆ. ಈಗ 35 ದಶಲಕ್ಷ ಟನ್ ಎಂ ಸ್ಯಾಂಡ್ ಸರಬರಾಜು ಮಾಡಲಾಗುತ್ತಿದೆ. ಮರಳು ನೀತಿಯಲ್ಲಿ ತಿದ್ದುಪಡಿ ತಂದು ಎಂ ಸ್ಯಾಂಡ್ ಉತ್ಪಾದನಾ ಘಟಕಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಎರಡು ಸಂಸ್ಥೆಯಿಂದ ಮಾರಾಟ: ನೂತನ ಮರಳು ನೀತಿ ಜಾರಿಗೆ ಬಂದ ನಂತರ, ನದಿ, ತೊರೆ, ಝುರಿಗಳಲ್ಲಿ ಮರಳು ಗಣಿಗಾರಿಕೆ ಹಾಗೂ ಮಾರಾಟಕ್ಕೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಹಟ್ಟಿ ಚಿನ್ನದ ಗಣಿ ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮಗಳ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ. ಹಟ್ಟಿ ಚಿನ್ನದ ಗಣಿಗೆ 15 ಜಿಲ್ಲೆಗಳು ಹಾಗೂ ಖನಿಜ ನಿಗಮಕ್ಕೆ 16 ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಎರಡು ಸಂಸ್ಥೆಗಳು ಮರಳು ಬ್ಲಾಕ್​ಗಳನ್ನು ಗುರುತಿಸಿ ಗಣಿಗಾರಿಕೆ ನಡೆಸಲಿವೆ. ಮಾರಾಟಕ್ಕೂ ಪ್ರತಿ ಜಿಲ್ಲೆಯಲ್ಲಿಯೂ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಇದರಿಂದ ಮರಳು ಮಾಫಿಯಾಕ್ಕೆ ಕಡಿವಾಣ ಬೀಳಲಿದೆ ಎಂದು ಸಚಿವ ಹಾಲಪ್ಪ ಆಚಾರ್ ಅಭಿಪ್ರಾಯಪಟ್ಟರು.

ಟನ್​ಗೆ 800 ರೂ.: ಲಭ್ಯ ಮರಳನ್ನು ಆಯಾ ಸಂಸ್ಥೆಗಳು ಆಯಾ ಜಿಲ್ಲೆಗಳಲ್ಲಿ ಜನವರಿಯಿಂದ ಯಾವುದೇ ಸಮಸ್ಯೆಯಾಗದಂತೆ ಮಾರಾಟ ಮಾಡಲಿವೆ. ಪ್ರತಿ ಟನ್​ಗೆ 800 ರೂ. ನಿಗದಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಳ್ಳ, ತೊರೆಗಳಲ್ಲಿ ಸಿಗುವ ಮರಳಿಗೆ ಟನ್​ಗೆ -ಠಿ;300 ದರ ಇರುತ್ತದೆ ಎಂದು ಹೇಳಿದರು.

ಐಎಲ್​ಎಂಎಸ್-2: ಮರಳು ಲಾರಿಗಳ ಮೇಲೆ ನಿಗಾವಹಿಸಲು ಇಷ್ಟು ದಿನ ಕೇವಲ ಜಿಪಿಎಸ್ ಅಳವಡಿಸಲಾಗುತ್ತಿತ್ತು. ಇನ್ನು ಐಎಲ್​ಎಂಎಸ್-2 ತಂತ್ರಜ್ಞಾನ ಅಳವಡಿಸಲಾಗುತ್ತದೆ. ಇದರಿಂದ ವೇ ಬ್ರಿಜ್​ನಿಂದ ಕೊನೆಯ ಹಂತಕ್ಕೆ ತಲುಪಿದ ಸಂಪೂರ್ಣ ಮಾಹಿತಿ ಜಿಲ್ಲಾ ಮತ್ತು ರಾಜ್ಯಮಟ್ಟದ ಇಲಾಖೆ ಕಚೇರಿಗೆ ಲಭ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.

ಡಿಸಿ ನೇತೃತ್ವದ ಸಮಿತಿ: ಮರಳಿನ ಮಾರಾಟದ ಮೇಲೆ ನಿಗಾವಹಿ ಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್​ಪೋರ್ಸ್ ರಚಿಸಿದ್ದು, ಡಿಸಿಗಳು ಸಂಪೂರ್ಣ ನಿಗಾವಹಿಸ ಲಿದ್ದಾರೆ ಎಂದು ಆಚಾರ್ ಹೇಳಿದರು.

ಮೊಬೈಲ್ ಆ್ಯಪ್: ಮರಳು ಮಾರಾಟಕ್ಕೆ ಸಂಬಂಧಿಸಿ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಮರಳು ಎಲ್ಲಿ ಲಭ್ಯವಾಗುತ್ತದೆ ಎಂಬುದನ್ನು ಈ ಮೂಲಕ ತಿಳಿಯಬಹುದು. ಹಣ ಪಾವತಿಸಿದರೆ ಮನೆ ಬಾಗಿಲಿಗೆ ಸರಬರಾಜು ಮಾಡುವ ವ್ಯವಸ್ಥೆಯೂ ಜಾರಿಗೆ ಬರಲಿದೆ ಎಂದರು.

15 ಬ್ಲಾಕ್​ಗಳಿಗೆ ಮರು ಟೆಂಡರ್: ಕಬ್ಬಿಣ ಅದಿರಿನ 27 ಬ್ಲಾಕ್​ಗಳನ್ನು ಹರಾಜು ಹಾಕಲು ಸುಪ್ರೀಂಕೋರ್ಟ್​ನಿಂದ ಅನುಮತಿ ಸಿಕ್ಕಿದೆ. ಅದರಲ್ಲಿ 12 ಬ್ಲಾಕ್​ಗಳ ಹರಾಜು ಮುಗಿದಿದೆ. ಉಳಿದವುಗಳ ಹರಾಜಿಗೆ ಸದ್ಯದಲ್ಲಿಯೇ ಮರು ಟೆಂಡರ್ ಕರೆಯಲಾಗುವುದು. ಹರಾಜಿನಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದರಿಂದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪುರಸ್ಕಾರ ಸಹ ಸಿಕ್ಕಿದೆ. ಹೊಸ ಬ್ಲಾಕ್​ಗಳನ್ನು ಗುರುತಿಸುವುದರಿಂದ ರಾಜಧನ ಹಾಗೂ ಉದ್ಯೋಗ ಸೃಷ್ಟಿ ಹೆಚ್ಚಳವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ 2021-22 ನೇ ಸಾಲಿಗೆ 4,357 ಕೋಟಿ ರೂ.ಗಳ ರಾಜಧನ ಸಂಗ್ರಹದ ಗುರಿ ಇತ್ತು. ಆದರೆ ಬಿಗಿ ಕ್ರಮಗಳನ್ನು ಕೈಗೊಂಡಿದ್ದರಿಂದ 6,308 ಕೋಟಿ ರೂ.ಗಳ ಸಂಗ್ರಹದೊಂದಿಗೆ ಶೇ.145 ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು. ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ 23 ಸಾವಿರ ಕೋಟಿ ರೂ.ಗಳು ಲಭ್ಯವಿದೆ. ಅದರ ಬಳಕೆಗೆ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿರಚನೆ ಮಾಡಲಾಗಿದೆ ಎಂದು ಹಾಲಪ್ಪ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net