

ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ಜಮೀನಿನ ಸಮಸ್ಯೆ ಉಲ್ಬಣಿಸಿದ್ದು, ಸ್ವಾಧೀನದಲ್ಲಿರುವ ಕುಮ್ಕಿ ಜಮೀನಿನನ್ನು ಕಲಂ ನಮೂನೆ 53-57 ಹಾಗು 93 ಸಿಸಿ ಪ್ರಕಾರ ಮಂಜೂರು ಮಾಡಬೇಕು ಎಂದು ಶಾಸಕ ಸುನೀಲ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸ್ವಾಧೀನದಲ್ಲಿರುವ ಕುಮ್ಕಿ ಜಮೀನನ್ನು ಸಕ್ರಮೀಕರಣಗೊಳಿಸಬೇಕೆಂದು ಸದನದಲ್ಲಿ ಈ ಹಿಂದೆ ಚರ್ಚೆಯಾಗಿತ್ತು. ಮಾ.12ರಂದು ಸುತ್ತೋಲೆ ಹೊರಡಿಸಿ, ಲೀಸ್‌ಗೆ ಕೊಡಬಹುದೆಂದು ಹೇಳಲಾಗಿದೆ. ಮನೆ ಕಟ್ಟಿಕೊಂಡ ಬಡವರಿಗೆ ಮಂಜೂರಾತಿ ಕೊಡಲು ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಬಳಿಕ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಕಾನೂನಿನ ಪ್ರಕಾರ ಕುಮ್ಕಿ ಜಮೀನನ್ನು ಯಾರಿಗೂ ಮಂಜೂರು ಮಾಡುವುದು ಸಾಧ್ಯವಿಲ್ಲ. ಆಗುತ್ತೆ, ನೋಡೋಣ ಎಂದು ಜನರಿಗೆ ತಪ್ಪು ಮಾಹಿತಿ ಅಥವಾ ತಪ್ಪು ನಿರೀಕ್ಷೆಗಳನ್ನು ನೀಡಲು ನಾವು ಸಿದ್ದರಿಲ್ಲ. ಕಹಿಯಾದರೂ ಸತ್ಯವನ್ನು ಹೇಳಲೇಬೇಕು. ಕುಮ್ಕಿ ಜಮೀನನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂಬುದೇ ಸತ್ಯ ಎಂದರು.
ಕುಮ್ಕಿ ಜನೀನನ್ನು ಮಂಜೂರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಸಂಪುಟ ಉಪ ಸಮಿತಿ ಸಭೆ ರಚನೆ ಮಾಡಿತ್ತು. ಈ ಸಭೆ ದೀರ್ಘ ಚರ್ಚೆ ನಡೆಸಿದ ನಂತರ ಕುಮ್ಕಿ ಜಮೀನನ್ನು ಮಂಜೂರು ಮಾಡುವುದು ಸಾಧ್ಯವಿಲ್ಲ ಎಂದು ಈ ವಿಚಾರವನ್ನೇ ಕೈಬಿಟ್ಟಿತ್ತು ಎಂಬ ಮಾಹಿತಿಯನ್ನು ಅವರು ಸದನಕ್ಕೆ ನೀಡಿದರು.
ಮುಂದುವರೆದು, ಕೆಎಲ್‌ಆರ್ ಆಕ್ಟ್ ರೂಲ್ 79ರ ಪ್ರಕಾರ ಕುಮ್ಕಿ ಪ್ರದೇಶವನ್ನು ಉಪಯೋಗ ಮಾಡಿಕೊಳ್ಳುವ ಹಕ್ಕನ್ನು ಜನರಿಗೆ ನೀಡಲಾಗಿದೆ. ಜಮೀನಿಗೆ ಹೊಂದಿಕೊಂಡಿರುವ ಕಾಡಿನ ಭಾಗದ ಉಪ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳುವ ಹಕ್ಕನ್ನು ನೀಡಲಾಗಿದೆ. ಆದರೆ, ಆ ಜಾಗಗಳನ್ನು ಮಂಜೂರು ಮಾಡಲಾಗುವುದಿಲ್ಲ ಎಂಬ ಅಂಶ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಕುಮ್ಕಿ ಜಮೀನನ್ನು ಕನಿಷ್ಠ ಭೋಗ್ಯಕ್ಕೆ ನೀಡುವುದಾದರೂ ಸಾಧ್ಯವಿದೆಯಾ ಎಂಬ ಕುರಿತು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಸ್ಪಷ್ಟೀಕರಣ ನೀಡಿದರು.
ಇದೇ ಸಂದರ್ಭದಲ್ಲಿ ಬಡವರ ಮನೆಯನ್ನೂ ತೆರವುಗೊಳಿಸಲಾಗದು. ಹಾಗಾಗಿ ಕಾನೂನಾತ್ಮಕವಾಗಿ ಸಕಾರಾತ್ಮಕವಾಗಿ ಮಾಡಬಹುದಾ ಎಂದು ಪ್ರಾಮಾಣಿಕವಾಗಿ ವಿಚಾರ ಮಾಡುತ್ತೇವೆ ಎಂದರು.