

ಶಿವಮೊಗ್ಗ: ಜಗತ್ತಿನಲ್ಲಿ ಯಾರೂ ಪರಿಪೂರ್ಣವಾಗಿ ಆರೋಗ್ಯವಂತರಲ್ಲ. ಒಂದಷ್ಟು ಕಾರಣದಿಂದ ಎಲ್ಲರೂ ಅನಾರೋಗ್ಯವಂತರೇ ಆಗಿಬಿಟ್ಟಿದ್ದಾರೆ. ಬಿದ್ದು ಹೋಗುವ ದೇಹದ ಆರೋಗ್ಯ ಮುಖ್ಯವಲ್ಲ. ನಮ್ಮಲ್ಲಿರುವ ಆರು ಅರಿಷಡ್ವರ್ಗಗಳು ನಿಯಂತ್ರಣದಲ್ಲಿದ್ದರೆ ಅದುವೇ ನಿಜವಾದ ಆರೋಗ್ಯ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ ಮಧ್ಯ ಕರ್ನಾಟಕದ ಮೊದಲ ಅಮೃತ ಬಿಂದು ತಾಯಂದಿರ ಹಾಲಿನ ಬ್ಯಾಂಕ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯ ನಿಯಂತ್ರಣದಲ್ಲಿದ್ದರೆ ಆರೋಗ್ಯ ಸದೃಢವಾಗಿರುತ್ತದೆ ಎಂದರು.
ಕ್ಷೀರಂ ಆಯುಷ್ಯಂ ವರ್ಧಂತಿ ಎನ್ನುತ್ತಾರೆ. ಹಾಲಿಗೆ 12 ಗಂಟೆ ಮಾತ್ರ ಆಯಸ್ಸು. ಹೆಚ್ಚು ಸಮಯ ಉಪಯೋಗಿಸಲು ಹಾಲು ಕಾಯಿಸುತ್ತೇವೆ. ಆನಂತರ ಮೊಸರು ಮಾಡುತ್ತೇವೆ. ಮೊಸರಿಗೆ 24 ಗಂಟೆ ಆಯಸ್ಸು. ಮೊಸರು ಕಡೆದರೆ ಮಜ್ಜಿಗೆ ಮತ್ತು ಬೆಣ್ಣೆ ಸಿಗಲಿದೆ. ಮಜ್ಜಿಗೆ 42 ಗಂಟೆ ಆಯಸ್ಸು. ಬೆಣ್ಣೆ ನವನೀತವಾಗಿದ್ದು ಒಂದು ವಾರ ಆಯಸ್ಸು. ಅದನ್ನು ತುಪ್ಪ ಮಾಡಿದರೆ ಅದಕ್ಕೆ ನೂರು ವರ್ಷ ಆಯಸ್ಸು ಎಂದರು.
ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ಭಾರತದ ಪರಂಪರೆಯಲ್ಲಿ ಮಕ್ಕಳಿಗೆ ತಾಯಿ ಹಾಲು ನೀಡುವುದು ಹೊಸದಲ್ಲ. ಆದರೆ ತಾಯಿ ಹಾಲಿಗೂ ಮೌಲ್ಯವರ್ಧನೆ ಸಿಗಬೇಕಿದೆ. ಕಲಿಯುಗದಲ್ಲಿ ಸಂಘಟನೆ ಇಲ್ಲದೇ ಯಾವುದೂ ಯಶಸ್ವಿ ಆಗಲ್ಲ. ರೋಟರಿ ಸಹಯೋಗದಲ್ಲಿ ಸರ್ಜಿ ಆಸ್ಪತ್ರೆಯೂ ಮಹತ್ವದ ಕಾರ್ಯಕ್ಕೆ ಕೈಹಾಕಿದೆ ಎಂದರು.
ರೋಟರಿ ಸೆಂಟ್ರಲ್ನ ಜೆ.ಪಿ.ಚಂದ್ರು ಮಾತನಾಡಿ, ಕಳೆದ ಒಂದು ವರ್ಷದ ಪ್ರಯತ್ನದ ಫಲವಾಗಿ ತಾಯಿ ಹಾಲು ಬ್ಯಾಂಕ್ ಆರಂಭವಾಗಿದ್ದು ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿ ಅಕ್ಕಪಕ್ಕದ ಜಿಲ್ಲೆಗಳ ಮಕ್ಕಳಿಗೆ ಅನುಕೂಲ ಆಗಲಿದೆ ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಎಚ್.ಪಿ.ಶಿವರಾಜ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದಯಾನಂದ ಸಾಗರ್ ಆಸ್ಪತ್ರೆ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಆಶಾ ಬೆನಕಪ್ಪ, ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ವೈದ್ಯ ಡಾ. ಪಿ.ನಾರಾಯಣ್, ಸರ್ಜಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ವಿ.ಪ್ರಶಾಂತ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ ಉಪಸ್ಥಿತರಿದ್ದರು.
ರಕ್ತದಂತೆ ತಾಯಿ ಹಾಲು ದಾನವೂ ಶ್ರೇಷ್ಠ
ರಕ್ತದಾನದಂತೆಯೇ ತಾಯಿ ಹಾಲು ದಾನ ಕೂಡ ಅತ್ಯಂತ ಶ್ರೇಷ್ಠ. ತಾಯಿ ಹಾಲು ದ್ರವ ರೂಪದ ಬಂಗಾರವಿದ್ದಂತೆ ಎಂದು ಸರ್ಜಿ ಆಸ್ಪತ್ರೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ಹೇಳಿದರು. ಈಗಾಗಲೇ ನಾಲ್ಕು ತಾಯಂದಿರು ಬ್ಯಾಂಕ್‌ಗೆ ಹಾಲು ದಾನ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ವಿಶ್ವದಲ್ಲಿ ಪ್ರತಿ ವರ್ಷ ತಾಯಿ ಹಾಲು ಸಿಗದೇ 2.30 ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. 4.30 ಲಕ್ಷ ಮಕ್ಕಳು ಕಾಂಗರೂ ತಾಯಿ ಆರೈಕೆ ಪಡೆಯುತ್ತಿದ್ದಾರೆ. 5 ಲಕ್ಷ ಮಕ್ಕಳನ್ನು ಶುಚಿತ್ವದಿಂದ ತಾಯಿ ಹಾಲು ಕೊಡುವುದರಿಂದ ಉಳಿಸಬಹುದು. ಹಾಗಾಗಿ ತಾಯಿ ಹಾಲು ಅಮೃತ ಎಂದರು. ತಾಯಿ ಹಾಲು ಪರಿಪೂರ್ಣ ಆಹಾರ. ಅವಧಿಪೂರ್ವ ಮಗುವಿನ ಕರುಳಿಗೆ ಹೊರಗಿನ ಹಾಲು ಜೀರ್ಣ ಆಗಲ್ಲ. ತಾಯಿ ಹಾಲು ಕುಡಿದ ಮಕ್ಕಳಿಗೆ ದೇಹ, ಮೆದುಳು, ಮೂತ್ರಪಿಂಡ ಸಹಿತ ಎಲ್ಲ ಬೆಳವಣಿಗೆ ಸಮರ್ಪಕ ಆಗುತ್ತದೆ. ಬಾಟಲ್ ಹಾಲು ಅತಿಸಾರ, ಶೀತ, ಜ್ವರ ಹೆಚ್ಚು ಎಂದರು.