ಶ್ರಮಕ್ಕೆ ತಕ್ಕ ಫಲ ಸಿಕ್ಕಾಗ ರೈತರ ಏಳಿಗೆ ಸಾಧ್ಯ: ಪಂಚಾಯಿತಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ ಅಭಿಮತ

11 mlv 3
Published on

ಮಳವಳ್ಳಿ: ಶ್ರಮಕ್ಕೆ ತಕ್ಕ ಫಲ ಸಿಕ್ಕಾಗ ಮಾತ್ರ ರೈತರ ಏಳಿಗೆ ಸಾಧ್ಯವಾಗಲಿದೆ ಎಂದು ಪಂಚಾಯಿತಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಜಿ. ರಾಮಕೃಷ್ಣ ಹೇಳಿದರು.

ತಾಲೂಕಿನ ಬೆಳಕವಾಡಿಯಲ್ಲಿ ಶುಕ್ರವಾರ ಸಂಘಟನೆಯ ಹೋಬಳಿ ಮಟ್ಟದ ಸಮಾವೇಶದಲ್ಲಿ ಮಾತನಾಡಿ, ಪ್ರಸ್ತುತ ಹೋರಾಟ ಇಲ್ಲದೆ ಬೆವರಿನ ಫಲ ಪಡೆಯಲು ಸಾಧ್ಯವಿಲ್ಲದಂತಾಗಿದ್ದು, ಅನ್ನದಾತರು ಪ್ರಾಂತ ರೈತ ಸಂಘದಡಿ ಸಂಘಟಿತರಾದರೆ ನಮ್ಮ ಹಕ್ಕನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಬೆಲೆ ಏರಿಕೆ ಆಗಿದೆ ಎಂದು ಶಾಸಕರು ವೇತನ ಮತ್ತು ಇತರ ಸೌಲಭ್ಯಗಳನ್ನು ಪಕ್ಷಾತೀತವಾಗಿ ಪಡೆಯಲು ಸದನದಲ್ಲಿ ಹೋರಾಟ ಮಾಡುತ್ತಾರೆ. ಆದರೆ ರೈತರಿಗೆ ಬೆಂಬಲ ಬೆಲೆ ನೀಡಲು ಏಕೆ ಜನಪ್ರತಿನಿಧಿಗಳ ಒಗ್ಗಟ್ಟು ಪ್ರದರ್ಶನ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.

ಮತ ಪಡೆದು ಆಯ್ಕೆಯಾದ ಯಾರೊಬ್ಬರು ರೈತರ ಹಿತಕ್ಕಾಗಿ ಚಕಾರ ಎತ್ತುವುದಿಲ್ಲ. ಎತ್ತಿದರೂ ಅದರ ಹಿಂದೆ ಅವರ ಸ್ವಾರ್ಥ ಇರು ತ್ತದೆ. ಆದ್ದರಿಂದ ರೈತ ಸಮುದಾಯ ಸಂಘಟಿತರಾಗಬೇಕೆಂದು ಸಲಹೆ ನೀಡಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಮಾತನಾಡಿ, ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡಿ 2364 ಹುದ್ದೆಗಳನ್ನು ರದ್ದು ಮಾಡಿದ್ದು, ತೋಟಗಾರಿಕೆ ಇಲಾಖೆಯನ್ನು ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ತಾಲೂಕಿನಲ್ಲಿ ಮುಡುಕುತೊರೆ ಏತ ನೀರಾವರಿ, ಸುರಗಿ ಏತ ನೀರಾವರಿ ಹಾಗೂ ಪೂರಿಗಾಲಿ ಹನಿ ನೀರಾವರಿ ಯೋಜನೆಗಳಿಗೆ ಭೂ ಸ್ವಾಧೀನಪಡಿಸಿಕೊಂಡ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಲ್ಲ. ಜನರ ನೈಜ ಸಮಸ್ಯೆಗಳ ಮರೆಮಾಚಲು ಮಹಾನ್ ನಾಯಕರು, ಸಮಾಜ ಸುಧಾರಕರ ಜಯಂತಿಗಳ ಹೆಸರಿನಲ್ಲಿ ಜಾತಿ ಜಯಂತಿ ಮಾಡುತ್ತಿದ್ದಾರೆ. ಪ್ರತಿಮೆ, ಭವನ, ವೃತ್ತಕ್ಕೆ ಹೆಸರಿಟ್ಟರೆ ರೈತರಿಗೆ ನೆಮ್ಮದಿ ಲಭಿಸುತ್ತದೆಯೆ ಎಂದು ಪ್ರಶ್ನಿಸಿದರು.

ಸಂಘದ ಕಾರ್ಯದರ್ಶಿ ಲಿಂಗರಾಜ ಮೂರ್ತಿ, ಉಪಾಧ್ಯಕ್ಷ ಗುರುಸ್ವಾಮಿ, ಶಿವಕುಮಾರ್, ಮರಿಲಿಂಗೇಗೌಡ, ಸಿದ್ದರಾಜು, ಮಹದೇವು, ಶಿವಕುಮಾರ್, ಸೌಭಾಗ್ಯಾ, ನವ್ಯಾ, ಶಿವಮಲ್ಲು, ಶಿವರಾಮು, ಬಸವರಾಜು, ಕೃಷ್ಣಪ್ಪ, ಸೋಮಶೇಖರ, ಮಾದೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net