

| ಶ್ರೀಕಾಂತ್ ಶೇಷಾದ್ರಿ ಹೈದರಾಬಾದ್
ಸಮಾನತೆಯ ಹರಿಕಾರ, ಸಂತ, ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೈದರಾಬಾದ್ ಸಮೀಪ ಅನಾವರಣಗೊಳಿಸಿದರು.
ಶತಮಾನಗಳ ಹಿಂದೆಯೇ ಸಮಾನತೆ ಬಗ್ಗೆ ಅರುಹಿದ, ಸರ್ವರಿಗೂ ದೇಗುಲ ಪ್ರವೇಶಕ್ಕೆ ಪ್ರೋತ್ಸಾಹ ನೀಡಿ, ವಸುಧೈವ ಕುಟುಂಬಕಂ ಸಂದೇಶವನ್ನು ಸಾರಿದ ಮಹಾತ್ಮರ 1003ನೇ ಜಯಂತಿ ಸಂದರ್ಭದಲ್ಲಿ ಸಮತಾಮೂರ್ತಿ ಸ್ಥಾಪನೆಯಾಗಿದೆ.
ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ವಿಗ್ರಹವನ್ನು ಸಮತಾಮೂರ್ತಿ ಎಂದು ಕರೆಯಲಾಗಿದೆ. ಹೈದರಾಬಾದ್ ಬಳಿಯ ರಂಗಾರೆಡ್ಡಿ ಜಿಲ್ಲೆಯ ಮುಚ್ಚಿಂತಲ್‌ನಲ್ಲಿರುವ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ ಈ ಮಹಾಮೂರ್ತಿ ಪ್ರತಿಷ್ಠಾಪನೆಗೊಂಡಿದೆ.
ಇದು ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆ ಎಂದು ಗುರುತಿಸಲಾಗಿದೆ. ಸುಮಾರು 216 ಅಡಿ ಉದ್ದವಿದ್ದು, ಈ ಪ್ರತಿಮೆಯ ನಿರ್ಮಾಣಕ್ಕೆ 1800 ಟನ್‌ಗಳಿಗಿಂತ ಹೆಚ್ಚು ಪಂಚ ಲೋಹಗಳನ್ನು ಬಳಸಲಾಗಿದೆ. ರಾಮಾನುಜಾಚಾರ್ಯರ ಸಹಸ್ರಾಬ್ಧಿ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಯಜ್ಞಗಳನ್ನು ಎರಡು ವಾರ ನಡೆಸಲಾಗುತ್ತಿದೆ.
ಸ್ಥಾಪನೆ ಉದ್ದೇಶ: ಸಮಾನತಾ ಪ್ರತಿಮೆ ಸ್ಥಾಪನೆಯ ಉದ್ದೇಶ ಬಹಳ ದೊಡ್ಡದಿದೆ ಎಂದು ಶ್ರೀ ತ್ರಿದಂಡಿ ಚಿನ್ನಜೀಯರ್ ತಿಳಿಸುತ್ತಾರೆ. ರಾಮಾನುಜಾಚಾರ್ಯರ ಕಾಲದಲ್ಲಿ ದೇವಸ್ಥಾನಗಳು ಸಮಾಜದ ಒಂದು ವರ್ಗದ, ಒಂದು ನಿರ್ದಿಷ್ಟ ಜಾತಿಯ ನಿಯಂತ್ರಣದಲ್ಲಿ ಆಡಳಿತದ ಕೇಂದ್ರಗಳಾಗಿದ್ದವು. ಇದನ್ನು ಗಮನಿಸಿದ ರಾಮಾನುಜಾಚಾರ್ಯರು ಕಂದಕ ದೂರ ಮಾಡಿ ಸಮಾನತೆ ತರಲು ಪ್ರಯತ್ನಿಸಿದರು. ಅವರ ಪ್ರಯತ್ನ ಸಾಕಷ್ಟು ಫಲನೀಡಿತ್ತು. ಅಷ್ಟೇ ಅಲ್ಲದೇ ಶ್ರೀ ರಾಮಾನುಜಾಚಾರ್ಯರು ಜಾತಿಗೆ ಪ್ರಾಮುಖ್ಯತೆ ಕೊಡದೆ, ಮಂತ್ರವನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಶ್ರದ್ಧೆ ಮತ್ತು ಕಲಿಯಲು ಉತ್ಸುಕರಾಗಿರುವುದನ್ನು ಅರ್ಹತೆ ಎಂದು ಭಾವಿಸಿದ್ದಲ್ಲದೆ, ಎಲ್ಲಾ ಜಾತಿಗಳ ಜನರು ದೇವಾಲಯಗಳ ನಿರ್ವಹಣೆಯಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದರು.