ಸಮದರ್ಶಿ ಪ್ರಹ್ಲಾದ, ಇಂದು ನರಸಿಂಹ ಜಯಂತಿ ನಿಮಿತ್ತ ಸೋಂದಾ ಶ್ರೀಗಳ ಲೇಖನ

sudina 1
Published on

* ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ

ಭಕ್ತ ಪ್ರಹ್ಲಾದನಿಗಾಗಿ ಕರುಣಾಮಯ ಭಗವಂತನು ಅವತರಿಸಿದ ದಿವಸ ಶ್ರೀ ಲಕ್ಷ್ಮೀನೃಸಿಂಹ ಜಯಂತಿ. ಭಗವಂತ ನೃಸಿಂಹನ ಚರಿತ್ರೆಯನ್ನು ಅವನ ಹೆಸರಿನಿಂದ ಕರೆಯದೆ ‘ಪ್ರಹ್ಲಾದ ಚರಿತ್ರೆ’ ಎಂಬುದಾಗಿ ಭಕ್ತನ ಹೆಸರಿನಿಂದಲೇ ಕರೆಯುವುದು ರೂಢಿ. ಬಹುಶಃ ಭಗವಂತನಿಗೆ ಅದು ಪ್ರೀತಿ. ಭಕ್ತನಿಗೆ ಭಗವಂತನ ಹೆಸರು ಪ್ರೀತಿಯಾದರೆ, ಭಗವಂತನಿಗೆ ಭಕ್ತನ ಹೆಸರು ಪ್ರೀತಿ. ಇದು ಭಗವಂತ-ಭಕ್ತರ ಸಂಬಂಧ. ದೈತ್ಯ(ದಿತಿಯ ವಂಶಜ)ನ ಮನೆಯಲ್ಲಿ ಹುಟ್ಟಿದ ಒಬ್ಬ ಚಿಕ್ಕ ಹುಡುಗನ ಬಗ್ಗೆ ಇಷ್ಟು ಭಗವಂತನಿಗೆ ಅಭಿಮಾನ ಇರುವುದಾದರೆ ಆತ ಎಂಥ ಮಹಾತ್ಮನಿರಬಹುದು? ಭಗವದ್ಗೀತೆಯ ವಿಭೂತಿ ಅಧ್ಯಾಯದಲ್ಲಿ ‘ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ’ ಎಂಬುದಾಗಿ ಭಗವಂತ ಹೇಳಿದ್ದಾನೆ. ದೈತ್ಯರಲ್ಲಿ ಪ್ರಹ್ಲಾದನು ನನ್ನ ‘ವಿಭೂತಿ’ - ನನ್ನ ಒಂದು ಸ್ವರೂಪ ಎಂಬುದಾಗಿ ಇದರರ್ಥ. ಭಕ್ತರನ್ನು ಒಟ್ಟಿಗೆ ಸೇರಿಸಿ ಪಟ್ಟಿ ಮಾಡಿ ಹೇಳುವಾಗ ಮೊಟ್ಟಮೊದಲು ಪ್ರಹ್ಲಾದನ ಹೆಸರು ಬರುತ್ತದೆ. ‘ಪ್ರಹ್ಲಾದ ನಾರದ ಪರಾಶರ ಪುಂಡರೀಕ ವ್ಯಾಸಾಂಬರೀಶ ಶುಕ ಶೌನಕಭೀಷ್ಮದಾಲ್ಭಾ ್ಯ್ | ರುಕ್ಮಾಂಗದಾರ್ಜುನ ವಸಿಷ್ಠ ವಿಭೀಷಣಾದೀನ್ ಧನ್ಯಾನ್ ಇಮಾನ್ ಪರಮ ಭಾಗವತಾನ್ ಸ್ಮರಾಮಿ ||’ ಎಂಬುದಾಗಿ ಭಕ್ತೋತ್ತಮರ ಒಂದು ಪಟ್ಟಿಯನ್ನು ಹೇಳುವ ಸಂಪ್ರದಾಯವಿದೆ. ಅದರಲ್ಲಿ ಮೊಟ್ಟಮೊದಲು ದೈತ್ಯಕುಲದ ಚಿಕ್ಕ ಹುಡುಗ ಪ್ರಹ್ಲಾದನ ಹೆಸರು ಬರುತ್ತದೆ. ಅಂತಹ ಪ್ರಹ್ಲಾದನ ಕುರಿತಾಗಿ ಒಂದಿಷ್ಟು ಚಿಂತನೆ.

ಪ್ರಹ್ಲಾದನನ್ನು ಜ್ಞಾನಿಭಕ್ತ ಎಂಬುದಾಗಿ ಪರಿಗಣಿಸುತ್ತಾರೆ. ನಾಲ್ಕು ವಿಧದ ಭಕ್ತರು - ಆರ್ತ, ಜಿಜ್ಞಾಸು, ಅರ್ಥಾರ್ಥೀ, ಜ್ಞಾನೀ ಎಂಬುದಾಗಿ. ಅವುಗಳಲ್ಲಿ ಕೊನೆಯದಾದ ಶ್ರೇಷ್ಠವಾದ ಭಕ್ತಿ ಜ್ಞಾನಭಕ್ತಿ. ಭಕ್ತಿಯು ತುಂಬ ಬೆಳೆದಾಗ ಪರಾಭಕ್ತಿ ಎಂಬ ಹೆಸರು ಪಡೆಯುತ್ತದೆ. ಆ ಪರಾಭಕ್ತಿ ಮತ್ತು ಜ್ಞಾನ ಒಂದೇ. ಜ್ಞಾನ ಎಂದರೆ ಇಲ್ಲಿ ಪುಸ್ತಕದ ಜ್ಞಾನವಲ್ಲ. ಪರಮಾತ್ಮಾನುಭವ ಎಂಬ ಜ್ಞಾನ ಇಲ್ಲಿ ಗ್ರಾಹ್ಯ. ಆ ಜ್ಞಾನ ಮತ್ತು ಪರಾಭಕ್ತಿಗಳೆರಡೂ ಒಂದೇ ಎಂಬುದಾಗಿ ಎಲ್ಲ ಹಿರಿಯರೂ ಹೇಳಿದ್ದಾರೆ. ಆ ಜ್ಞಾನ-ಭಕ್ತಿಯುಳ್ಳವನೇ ಜ್ಞಾನಿಭಕ್ತ. ಪ್ರಹ್ಲಾದನು ಅಂಥವನು.

ಪ್ರಹ್ಲಾದನ ಸ್ವಭಾವವನ್ನು ಹೇಳುತ್ತಾರೆ - ‘ಬ್ರಹ್ಮಣ್ಯಃ ಶೀಲಸಂಪನ್ನಃ ಸತ್ಯಸಂಧೋ ಜಿತೇಂದ್ರಿಯಃ | ಆತ್ಮವತ್ ಸರ್ವಭೂತಾನಾಂ ಏಕಃ ಪ್ರಿಯಸುಹೃತ್ತಮಃ |’ ಅವನು ವಿಪ್ರಕುಲವನ್ನು ಗೌರವಿಸುತ್ತಿದ್ದ, ಯಾವಾಗಲೂ ಬ್ರಹ್ಮಚಿಂತನೆಯಲ್ಲಿಯೇ ಇರುತ್ತಿದ್ದ. ಒಳ್ಳೆಯ ನಡತೆಗಳಿಂದ ಕೂಡಿದ್ದ. ಸತ್ಯ ನಿಷ್ಠೆಯುಳ್ಳವನಾಗಿದ್ದ, ಜಿತೇಂದ್ರಿಯನಾಗಿದ್ದ, ಎಲ್ಲ ಪ್ರಾಣಿಗಳನ್ನು ‘ಆತ್ಮವತ್’ ಆಗಿ ನೋಡುತ್ತಿದ್ದ, ಪರಮಾತ್ಮನಂತೆ ತಾನೊಬ್ಬನೇ ಎಲ್ಲ ಪ್ರಾಣಿಗಳ ಹಿತೈಷಿಯಾಗಿದ್ದ. ಇಲ್ಲಿರುವ ‘ಆತ್ಮವತ್ ಸರ್ವಭೂತಾನಾಂ ಏಕಃ ಪ್ರಿಯಸುಹೃತ್ತಮಃ |’ ಎಂಬ ಸಾಲು ತುಂಬ ವಿಶಿಷ್ಟವಾದದ್ದು. ಅವನ ಸಮದರ್ಶಿತ್ವದ ಉಲ್ಲೇಖ ಈ ಸಾಲಿನಲ್ಲಿದೆ. ಮೂಲತಃ ಒಬ್ಬನೇ ಆಗಿರುವ ಪರಮಾತ್ಮನು ಎಲ್ಲ ಪ್ರಾಣಿಗಳ ಹೃದಯದಲ್ಲೂ ತಾನಿದ್ದುಕೊಂಡು ಎಲ್ಲರ ಸುಹೃತ್, ಎಂದರೆ ಎಲ್ಲರ ಹಿತೈಷಿಯಾಗಿದ್ದಾನೆ. ಇದು ಭಗವದ್ಗೀತೆಯಲ್ಲಿಯೂ ಉಲ್ಲೇಖಗೊಂಡಿದೆ. ‘ಭೋಕ್ತಾರಂ ಯಜ್ಞತಪಸಾಂ ಸರ್ವಭೂತಮಹೇಶ್ವರಂ | ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ||’ ಪರಮಾತ್ಮನಂತೆ ಪ್ರಹ್ಲಾದನು ಎಲ್ಲರ ಹಿತೈಷಿಯಾಗಿದ್ದನು. ಅಂದರೆ ಎಲ್ಲ ಪ್ರಾಣಿಗಳಲ್ಲೂ ತನ್ನೊಳಗಿರುವ ಪರಮಾತ್ಮನನ್ನೇ ಕಾಣುತ್ತಿದ್ದನು. ಹೀಗೆ ಕಂಡಾಗ ಮಾತ್ರವೇ ಎಲ್ಲ ಪ್ರಾಣಿಗಳನ್ನೂ ತನ್ನಂತೆಯೇ ನೋಡಲು ಸಾಧ್ಯ. ಪ್ರತಿಯೊಬ್ಬನೂ ತನ್ನ ಹಿತೈಷಿಯಾಗಿರುತ್ತಾನೆ. ಪ್ರಹ್ಲಾದನು ಹೇಗೆ ತನ್ನ ಹಿತೈಷಿಯಾಗಿದ್ದನು, ಯಾವ ಪರಿಮಾಣದಲ್ಲಿ ಆತ ತನ್ನ ಹಿತವನ್ನು ಬಯಸುತ್ತಿದ್ದನೋ, ಅದೇ ರೀತಿಯಲ್ಲಿ, ಅದೇ ಪರಿಮಾಣದಲ್ಲಿ ಎಲ್ಲ ಪ್ರಾಣಿಗಳ ಹಿತವನ್ನು ಬಯಸುತ್ತಿದ್ದನು. ‘ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೊà—ರ್ಜುನ | ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ||’ ಎಂಬುದಾಗಿ ಗೀತಾಚಾರ್ಯನು ಯಾವ ಸಮದರ್ಶನವನ್ನು ಹೇಳಿರುತ್ತಾನೋ ಆ ಸಮದರ್ಶನ ಪ್ರಹ್ಲಾದನಲ್ಲಿತ್ತು.

‘ದಾಸವತ್ ಸಂನ್ನತಾರ್ಯಂಘ್ರಿಃ ಪಿತೃವತ್ ದೀನವತ್ಸಲಃ | ಭ್ರಾತೃವತ್ ಸದೃಶೇ ಸ್ನಿಗ್ಧಃ ಗುರುಷ್ವೀಶ್ವರಭಾವನಃ || ವಿದ್ಯಾರ್ಥರೂಪಜನ್ಮಾಢ್ಯೋ ಮಾನಸ್ತಂಭವಿವರ್ಜಿತಃ || ದಾಸನಂತೆ ಹಿರಿಯರ ಪಾದಗಳಿಗೆ ಆತ ವಂದಿಸುತ್ತಿದ್ದ. ಅಂತಹ ವಿನಯ ಅವನಲ್ಲಿತ್ತು. ದೀನರನ್ನು ಕಂಡರೆ ತಂದೆಯಂತೆ ವಾತ್ಸಲ್ಯವುಳ್ಳವನಾಗುತ್ತಿದ್ದ. ತನ್ನ ಸರಿಸಮಾನರಲ್ಲಿ ಸಹೋದರನಂತೆ ಪ್ರೀತಿಯಿಂದ ಇರುತ್ತಿದ್ದ. ಗುರುಗಳಲ್ಲಿ ಈಶ್ವರನನ್ನು ಕಾಣುತ್ತಿದ್ದ. ವಿದ್ಯೆ, ಸಂಪತ್ತು, ಸೌಂದರ್ಯ ಮತ್ತು ರಾಜಕುಲದಲ್ಲಿ ಜನ್ಮ, ಇವುಗಳಿದ್ದುದರಿಂದ ಆಢ್ಯನಾಗಿದ್ದರೂ ಗರ್ವ-ಅಹಂಕಾರ ಇಲ್ಲದವನಾಗಿದ್ದ. ಪರಿಪೂರ್ಣ ಜ್ಞಾನಿಗಳಲ್ಲಿರುವ ವಿನಯಸಂಪನ್ನತೆ ಅವನಲ್ಲಿತ್ತು.

‘ನೋದ್ವಿಗ್ನಚಿತ್ತೋ ವ್ಯಸನೇಷು ನಿಃಸ್ಪಹಃ ಶ್ರುತೇಷು ದೃಷ್ಟೇಷು ಗುಣೇಷ್ವವಸ್ತುದೃಕ್ | ದಾಂತೇಂದ್ರಿಯಪ್ರಾಣಶರೀರಧೀಃ ಸದಾ ಪ್ರಶಾಂತಕಾಮೋ ರಹಿತಾಸುರೋಸುರಃ ||’ ಕಷ್ಟಗಳಲ್ಲಿ ಅವನು ಉದ್ವೇಗಕ್ಕೆ ಒಳಗಾಗುತ್ತಿರಲಿಲ್ಲ. ಐಹಿಕ ಮತ್ತು ಪಾರಲೌಕಿಕಸುಖಗಳಲ್ಲಿ ನಿಃಸ್ಪಹನಾಗಿದ್ದನು. ಏಕೆಂದರೆ ಈ ಎರಡೂ ವಿಧದ ಸುಖಗಳು, ಸತ್ಯ-ಶಾಶ್ವತವಲ್ಲ ಎಂಬುದನ್ನು ಆತ ಅರಿತಿದ್ದನು. ಇದು ಅವನಲ್ಲಿರುವ ವೈರಾಗ್ಯ. ಪರಿಪೂರ್ಣ ಜ್ಞಾನಿಗಳಲ್ಲಿ ಈ ರೀತಿಯ ವೈರಾಗ್ಯವಿರುತ್ತದೆ. ಇಂದ್ರಿಯ, ಪ್ರಾಣ, ಶರೀರ ಮತ್ತು ಬುದ್ಧಿಗಳನ್ನು ನಿಯಮದಲ್ಲಿಟ್ಟುಕೊಂಡಿದ್ದ. ಅಸುರರ ಕುಲದಲ್ಲಿ ಹುಟ್ಟಿದ್ದರೂ ಸ್ವತಃ ಆಸುರೀಗುಣಗಳಿಲ್ಲದವನಾಗಿದ್ದ. ಇವೆಲ್ಲವೂ ಆತನ ಪರಿಪೂರ್ಣತೆಯನ್ನು ಸೂಚಿಸುತ್ತವೆ.

ಇನ್ನು ಮುಂದಿನ ಶ್ಲೋಕಗಳಲ್ಲಿ ಆತನ ವಾಸುದೇವಭಕ್ತಿಯನ್ನು ಹೇಳಿದ್ದಾರೆ. ಕೆಲವೊಮ್ಮೆ ಅಳುತ್ತ, ಕೆಲವೊಮ್ಮೆ ನಗುತ್ತ, ಕೆಲವೊಮ್ಮೆ ಹಾಡುತ್ತ, ಕೆಲವೊಮ್ಮೆ ಯಾವ ಸಂಕೋಚವಿಲ್ಲದೆ ಕುಣಿಯುತ್ತ ವಾಸುದೇವನ ಭಕ್ತಿಯ ಉನ್ಮಾದದಲ್ಲಿ ಆತ ಇರುತ್ತಿದ್ದ. ಇವೆಲ್ಲವೂ ಪರಿಪಕ್ವ ಭಕ್ತರಲ್ಲಿ ಇರುವ ಗುಣಗಳೇ ಆಗಿವೆ. ಆಧುನಿಕ ಕಾಲದಲ್ಲೂ ಶ್ರೀ ಚೈತನ್ಯ ಮಹಾಪ್ರಭು, ಶ್ರೀ ರಾಮಕೃಷ್ಣ ಪರಮಹಂಸರು ಮುಂತಾದವರು ಹೀಗೆ ಇರುತ್ತಿದ್ದುದನ್ನು ನಾವು ಓದುತ್ತೇವೆ, ಕೇಳುತ್ತೇವೆ. ಇನ್ನೂ ಅನೇಕ ಗುಣಗಳು ಪ್ರಹ್ಲಾದನಲ್ಲಿ ಇದ್ದವೆಂದು ಭಾಗವತವು ಹೇಳುತ್ತದೆ. ಅವನು ಇಂತಹ ಜ್ಞಾನಿಭಕ್ತನಾದ್ದರಿಂದಲೇ ಹಿರಣ್ಯಕಶಿಪು ಅವನನ್ನು ಕುರಿತಾಗಿ ಮಾಡಿದ ಎಲ್ಲ ದೋಷಗಳೂ ಭಗವಂತನಿಗೇ ತಲುಪಿದವು. ‘ಜ್ಞಾನೀ ತು ಆತ್ಮೆ ೖವ ಮೇ ಮತಂ’ ಆದ್ದರಿಂದ ಭಗವಂತ ಕೂಡಲೇ ಎದ್ದು ಬರಬೇಕಾಯಿತು. ಒಬ್ಬನೇ ಭಕ್ತನ ರಕ್ಷಣೆಗಾಗಿ, ಯಾವುದೇ ಪೂರ್ವಸಿದ್ಧತೆ (ಉಳಿದ ಅವತಾರಗಳಲ್ಲಿರುವಂತೆ ತಾಯಿ-ತಂದೆ ಮುಂತಾದ ಪೂರ್ವಯೋಜನೆ) ಇಲ್ಲದೆ ಭಗವಂತ ಬಂದಿರುವ ಅವತಾರ ಈ ನೃಸಿಂಹಾವತಾರ. ಭಗವಂತನ ಸರ್ವವ್ಯಾಪಕತ್ವ, ಭಕ್ತಕಾರುಣ್ಯ, ಭಕ್ತತಾದಾತ್ಮ ್ಯಳು ಇಲ್ಲಿ ಪ್ರಕಟಗೊಂಡಿವೆ. ಪ್ರಹ್ಲಾದನ ಭಕ್ತಿ ಮತ್ತು ಸದ್ಗುಣಗಳು ನಮ್ಮೆಲ್ಲರನ್ನೂ ವಿಶೇಷವಾಗಿ ಮಕ್ಕಳನ್ನು ಪ್ರೇರೇಪಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net