

ಬೆಂಗಳೂರು: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆಯು ಸ್ವೀಕಾರಾರ್ಹವಲ್ಲ. ಚರ್ಮದ ಬಣ್ಣ ಆಧರಿಸಿ ದಕ್ಷಿಣ ಭಾರತೀಯರನ್ನು ಆಫ್ರಿಕಾದವರಿಗೆ ಹೋಲಿಸಿದ ಸ್ಯಾಮ್ ಪಿತ್ರೋಡಾ, ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಪಿತ್ರೋಡಾ ಮಾತುಗಳು ನೆಹರೂ-ಗಾಂಧಿ ಕುಟುಂಬದೊಳಗಿನ ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದ್ದಾರೆ.
ಸಮಾನತೆಯ ಪ್ರತಿಪಾದಕರಾದ ನಾವು ಇಂತಹ ಹೇಳಿಕೆಗಳನ್ನು ಬಲವಾಗಿ ವಿರೋಧಿಸುತ್ತೇವೆ. ಇದು, ಕಾಂಗ್ರೆಸ್ ಪಕ್ಷದೊಳಗಿನ ವಿಭಜಕ ದೃಷ್ಟಿಕೋನವಾಗಿದೆ. ಕನ್ನಡಾಭಿಮಾನಕ್ಕೆ ವಿಶೇಷ ಒತ್ತು ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ತಮ್ಮ ನಿಲುವೇನು ? ಎನ್ನುವುದನ್ನು ತಿಳಿಸಬೇಕು ಎಂದು ಬಿ.ವೈ.ವಿಜಯೇಂದ್ರ ಕೇಳಿದ್ದಾರೆ.