

Salman Khan | ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಸಿಕಂದರ್ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ಸಲ್ಮಾನ್ಖಾನ್ ಈ ಹಿಂದೆ ಹಲವಾರು ವಿವಾದಗಳನ್ನು ಎದುರಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ನಿಮ್ಮ ಚಿತ್ರಗಳು ಬಿಡುಗಡೆಯಾದಾಗ ಒಂದಲ್ಲಾ ಒಂದು ವಿವಾದಗಳು ಟ್ರೆಂಡ್ ಆಗುತ್ತಲೇ ಇರುತ್ತವೆ ಎಂಬ ಪ್ರಶ್ನೆಗೆ ಚಿತ್ರದ ಪ್ರಚಾರದ ಸಮಯದಲ್ಲಿ ಸಲ್ಮಾನ್ ಉತ್ತರಿಸಿದ್ದು, ಸಿಕಂದರ್ ಸಿನಿಮಾ ಸುತ್ತ ಯಾವುದೇ ವಿವಾದಗಳು ಬೇಡ ಎಂದಿದ್ದಾರೆ.
ನಾವು ಈಗಾಗಲೇ ಹಲವಾರು ವಿವಾದಗಳನ್ನು ಎದುರಿಸಿದ್ದೇವೆ, ನನಗೆ ಯಾವುದೇ ವಿವಾದಗಳ ಅಗತ್ಯವಿಲ್ಲ. ವಿವಾದಗಳು ಸಿನಿಮಾವನ್ನು ಹಿಟ್ ಮಾಡುತ್ತದೆ ಎಂದು ನಾನು ನಿರೀಕ್ಷೆ ಮಾಡುವುದಿಲ್ಲ. ಕೆಲವೊಮ್ಮೆ ವಿವಾದಗಳಿಂದಾಗಿಯೇ ಎಷ್ಟೋ ಚಿತ್ರಗಳು ಬಿಡುಗಡೆಗೆ ವಿಳಂಬವಾಗುವುದನ್ನು ನಾವು ನೋಡಿದ್ದೇವೆ ಎಂದಿದ್ದಾರೆ.
ಎರಡು ದಿನ ಕಳೆದರೆ ಸಿಕಂದರ್ ಚಿತ್ರ ಬಿಡುಗಡೆಯಾಗಲಿದೆ. ಹೀಗಿರುವಾಗ ಯಾವುದೇ ವಿವಾದದ ಅಗತ್ಯವಿಲ್ಲ. ಟ್ರೇಲರ್‌ನಲ್ಲಿ ನೋಡಿರುವುದಕ್ಕಿಂತ ಹೆಚ್ಚಿನದನ್ನು ಚಿತ್ರವು ಪ್ರೇಕ್ಷಕರಿಗೆ ನೀಡುತ್ತದೆ ಎಂದು ಸಲ್ಮಾನ್ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಇದು ಕೇವಲ 3.5 ನಿಮಿಷಗಳ ಟ್ರೇಲರ್. ನೀವು 2 ಗಂಟೆ 25 ನಿಮಿಷಗಳ ಚಿತ್ರವನ್ನು ನೋಡಿದಾಗ ಈ ಟ್ರೇಲರ್ ಏನೇನೂ ಅಲ್ಲ ಎಂದು ನಿಮಗೆ ಅನಿಸುತ್ತದೆ. ನಾವು ಟ್ರೇಲರ್‌ನಲ್ಲಿ ಎಲ್ಲವನ್ನೂ ಹಾಕಲು ಸಾಧ್ಯವಿಲ್ಲ. ಇದರ ಹೊರತಾಗಿ ಸಿನಿಮಾದಲ್ಲಿ ನಿಮಗೆ ಇಷ್ಟವಾಗುವ ಬಹಳಷ್ಟು ವಿಷಯಗಳಿವೆ. ಆ್ಯಕ್ಷನ್ ಚಿತ್ರಕ್ಕೆ ಭಾವನೆಗಳು ಬಹಳ ಮುಖ್ಯ ಎಂದಿದ್ದಾರೆ.
ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್, ಅಂಜಿನಿ ಧವನ್ ಮತ್ತು ಜತಿನ್ ಸರ್ನಾ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಹಿಂದಿ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಹೆಸರುವಾಸಿಯಾದ ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ. 2014ರ ಬ್ಲಾಕ್‌ಬಸ್ಟರ್ 'ಕಿಕ್' ನಂತರ ಸಲ್ಮಾನ್ ಅವರೊಂದಿಗೆ ಮತ್ತೆ ಒಂದಾಗುತ್ತಿರುವ ಸಾಜಿದ್ ನಾಡಿಯಾಡ್‌ವಾಲಾ ಚಿತ್ರವನ್ನು ನಿರ್ಮಿಸಿದ್ದಾರೆ.