

Salman Khan | ಬಾಲಿವುಡ್ನ ಜನಪ್ರಿಯ ನಟಿ ಪೂನಂ ಧಿಲ್ಲೋನ್ ತಮ್ಮ ಸಿನಿ ಜರ್ನಿಯಲ್ಲಿ ಅತ್ಯಂತ ಜನಪ್ರಿಯ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಲೈಲಾ ಸಿನಿಮಾದಲ್ಲಿ ಸುನಿಲ್ ದತ್ ಅವರ ಮಗಳ ಪಾತ್ರದಿಂದ ಹಿಡಿದು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಲೈಲಾ ಚಿತ್ರದಲ್ಲಿ ಪೂನಂ, ಸುನಿಲ್ ದತ್ ಮಗಳ ಪಾತ್ರವನ್ನು ಮಾಡುವ ಸಂದರ್ಭದಲ್ಲಿ ಸಲ್ಮಾನ್ ಖಾನ್ ಚಿಕ್ಕವನಾಗಿದ್ದ, ನಾನು ಆತನನ್ನ ಮದುವೆಯಾಗಲು ಬಯಸುತ್ತಿದ್ದೆ ಎಂದು ತಮಾಷೆಯಾಗಿ ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾದಲ್ಲಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಆತ ಚಿಕ್ಕ ಹುಡುಗನಾಗಿದ್ದಾಗ ನಾನು ಅವನನ್ನು ಸಲೀಂ-ಜಾವೇದ್ ಅವರ ಮನೆಯಲ್ಲಿ ನೋಡುತ್ತಿದ್ದೆ. ಸಲ್ಮಾನ್ ನನಗಿಂತ ಚಿಕ್ಕವನಾಗಿದ್ದ, ಆ ಸಂದರ್ಭದಲ್ಲಿ ಅವನು ತುಂಬಾ ಸುಂದರವಾಗಿದ್ದ ಅವನು ದೊಡ್ಡ ಸ್ಟಾರ್ ಆಗುತ್ತಾನೆಂದು ನಾನು ಎಂದಿಗೂ ಊಹಿಸಿರಲಿಲ್ಲ. ನಾನು ಕೆಲಸ ಮಾಡುವಾಗ ಸಲೀಂ-ಜಾವೇದ್ ಅವರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ. ನಂತರ ಮೈನೆ ಪ್ಯಾರ್ ಕಿಯಾ ಚಿತ್ರ ಬಿಡುಗಡೆಯಾದಾಗ ನಾನು ವಿವಾಹವಾದೆ. ಆದರೂ ಸಹ ನಾನು ಸಲ್ಮಾನ್ ಖಾನ್ರನ್ನ ಇಷ್ಟ ಪಡುತ್ತಿದ್ದೆ, ನನ್ನ ಪತಿ ಅಶೋಕ್ ಠಾಕೇರಿಯಾ ಅವರನ್ನು ತಮಾಷೆಯಾಗಿ ತಬ್ಬಿಕೊಂಡು ನೋಡಿ ಆತ ಎಷ್ಟು ಮುದ್ದಾಗಿದ್ದಾನೆ ಎಂದು ಹೇಳಿದ್ದೇನೆ. ಕೆಲವು ಕ್ರಷ್ಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಲ್ಮಾನ್ ಖಾನ್ ಮೇಲೆ ಇದ್ದಂತಹ ಪ್ರೀತಿಯ ಬಗ್ಗೆ ನಟಿ ಪೂನಂ ಧಿಲ್ಲೋನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟಿ ಪೂನಂ ಧಿಲ್ಲೋನ್ ಅವರಿಗೆ ತುಂಬಾ ಆತ್ಮೀಯವಾದ ಸ್ನೇಹ ಬಳಗವಿದೆ. ಈ ಬಗ್ಗೆ ಸ್ವತಃ ಅವರೇ ಮಾತನಾಡಿದ್ದು, ನನಗಿರುವ ಸ್ನೇಹಿತರ ಗುಂಪಿನಲ್ಲಿ ನಟಿ ರೇಖಾ ನನಗೆ ತುಂಬಾ ಹತ್ತಿರವಾದವಳು, ಅವಳ ಮೇಲೆ ನನಗೆ ತುಂಬಾ ಪ್ರೀತಿ ಜಾಸ್ತಿ ಎಂದಿದ್ದಾರೆ.
ಪೂನಂ ಧಿಲ್ಲೋನ್ ಅವರು ನಟಿ ಪೂನಂ ಪದ್ಮಿನಿ ಕೊಲ್ಹಾಪುರೆ ಬಗ್ಗೆ ಮಾತನಾಡಿದ್ದು, ನಾವಿಬ್ಬರೂ 'ಸ್ಟ್ರೀಟ್ ಸಿಂಗರ್' ಚಿತ್ರೀಕರಣದ ಸಮಯದಲ್ಲಿ ಮೊದಲು ಭೇಟಿಯಾದೆವು. ನಂತರ ಒಳ್ಳೆಯ ಸ್ನೇಹಿತರಾಗಿ ಚಿತ್ರೀಕರಣದ ಸಂದರ್ಭದಲ್ಲಿ ಬಿಡುವಿನ ವೇಳೆಯಲ್ಲಿ ತಮಾಷೆಯಾಗಿ ಮಾತನಾಡುತ್ತಾ ಸಂತೋಷ ಪಡುತ್ತಿದ್ದೆವು ಎಂದಿದ್ದಾರೆ. ಈ ಚಿತ್ರದಲ್ಲಿ ನಾನು ಮತ್ತು ಪದ್ಮಿನಿ ಇಬ್ಬರೂ ಕೂಡ ಸಂಜಯ್ ದತ್ ಅವರೊಂದಿಗೆ ಕೆಲಸ ಮಾಡಿದೆವು. ಅವರು ತುಂಬಾ ಸುಂದರವಾಗಿ ಕಾಣುತ್ತಾರೆಂದು ಎಲ್ಲರೂ ಅವರನ್ನೇ ನೋಡುತ್ತಿದ್ದರು ಎಂದು ಪೂನಂ ಹಳೆ ನೆನಪನ್ನು ಮರುಕಳಿಸಿದ್ದಾರೆ.