

ಬೆಂಗಳೂರು: ರಾಜಸ್ಥಾನದ ಅಳ್ವಾರ್ ಸರ್ಕ್ಯೂಟ್ ಹೌಸ್‌ನಲ್ಲಿ ಎಐಸಿಸಿ ಉಸ್ತುವಾರಿ, ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರನ್ನು ರಾಜಸ್ಥಾನದ ವಿರೋಧ ಪಕ್ಷದ ನಾಯಕ ಟಿಕಾ ರಾಮ್ ಜುಲ್ಲಿ ಭೇಟಿ ಮಾಡಿದರು. ಪಕ್ಷ ಸಂಘಟನೆ ಮತ್ತು ನೂತನ ಜಿಲ್ಲಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಚರ್ಚಿಸಿದರು.
ಸಂಘಟನ್ ಶ್ರೀಜನ್ ಅಭಿಯಾನದಡಿಯಲ್ಲಿ ಪಕ್ಷ ಸಂಘಟನೆ ಮತ್ತು ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ಈಗಾಗಲೇ ಎಐಸಿಸಿ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಅಳ್ವಾರ್ ಜಿಲ್ಲೆಗೆ ಎರಡನೇ ಬಾರಿಗೆ ಭೇಟಿ ನೀಡಿರುವ ಸಲೀಂ ಅಹ್ಮದ್, ಜಿಲ್ಲಾ ಅಧ್ಯಕ್ಷರ ನೇಮಕ ಸಂಬಂಧ ಅಭಿಪ್ರಾಯ ಸಂಗ್ರಹಿಸಿದರು.
ಅ.21ರ ವರೆಗೂ ಎಲ್ಲೆಡೆ ಸಭೆಗಳನ್ನು ಕರೆದು ಡಿಸಿಸಿ ಅಧ್ಯಕ್ಷರ ನೇಮಕಾತಿ ಸಂಬಂಧ ಸ್ಥಳೀಯ ನಾಯಕರು, ಸಮಾಜ ಸೇವಕರು, ಹಾಲಿ-ಮಾಜಿ ಸಂಸದರು, ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹ ಮಾಡಿ ಪಟ್ಟಿ ಸಿದ್ದಪಡಿಸಲಿದ್ದಾರೆ. ಆನಂತರ ದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಒಪ್ಪಿಸಲಿದ್ದಾರೆ.
ಈ ವೇಳೆ ಮಾಜಿ ಶಾಸಕರಾದ ಇಂದ್ರಾಜ್ ಸಿಂಗ್ ಗುರ್ಜಾರ್, ಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಸುಮೀತ್ ಗರ್ಗ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರುಗಳು ಮತ್ತಿತರರು ಉಪಸ್ಥಿತರಿದ್ದರು.