

ಭೇರ್ಯ: ಇಪ್ಪತ್ತು ವರ್ಷಗಳಿಂದ ಅಭಿವೃದ್ಧಿ ಕಾಣದೆ ಚಿಕಿತ್ಸೆಗಾಗಿ ಕಾದು ಕುಳಿತ್ತಿದೆ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರ. ವೈದ್ಯರ ಮತ್ತು ಕೊಠಡಿಗಳ ಸಂಖ್ಯೆ ಕೊರತೆಯಿಂದ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ದೂರದೂರುಗಳಿಗೆ ಅಲೆಯುವ ಪರಿಸ್ಥಿತಿ ಸಾಲಿಗ್ರಾಮದಲ್ಲಿ ನಿರ್ಮಾಣವಾಗಿದೆ.
ಸಾಲಿಗ್ರಾಮ ತಾಲೂಕು ಕೇಂದ್ರವಾಗಿ ಸುಮಾರು 3 ವರ್ಷಗಳು ಕಳೆಯುತ್ತಾ ಬಂದ್ದಿರೂ ತಾಲೂಕಿನ ಹೃದಯ ಭಾಗದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಮಾತ್ರ ಮೇಲ್ದರ್ಜೆಗೇರಿಲ್ಲ. ಇದೂವರೆಗೆ ಆಸ್ಪತ್ರೆ ಅಭಿವೃದ್ಧಿ ಕಂಡಿಲ್ಲ. ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಗಳಲ್ಲೇ ಇಂತಹ ದುಸ್ಥಿತಿ ನಿರ್ಮಾಣವಾದರೆ ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪಾಡು ಹೇಳತೀರದಾಗಿದೆ. ಸರ್ಕಾರ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಬದಲು ಆಸ್ಪತ್ರೆಗಳಿಗೆ ಚಿಕಿತ್ಸೆ ಕೊಡುವ ಅವಶ್ಯಕತೆ ಇದೆ ಎನ್ನುತ್ತಾರೆ ನಾಗರಿಕರು.
ನಾಲ್ವರು ವೈದ್ಯರಿಗೆ 400 ಜನ ರೋಗಿಗಳು: 30 ಬೆಡ್‌ಗಳ ಸಾಮರ್ಥ್ಯದ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಲ್ವರು ವೈದ್ಯರು ಮಾತ್ರ ಇದ್ದಾರೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಇರುವ ನಾಲ್ವರು ವೈದ್ಯರು ನಿತ್ಯ 300 ರಿಂದ 400 ಜನ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕ ಡಿ.ರವಿಶಂಕರ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿ ವರ್ಗಾವಣೆಯಾಗಿದ್ದ ಇಬ್ಬರು ವೈದ್ಯರನ್ನು ಇಲ್ಲೇ ಉಳಿಯುವಂತೆ ಮಾಡಿದ್ದಾರೆ. ಆದರೆ ಇದು ತಾತ್ಕಾಲಿಕ ಪರಿಹಾರವಾಗಿದ್ದು, ಹೆಚ್ಚುವರಿ ವೈದ್ಯರ ನೇಮಕಕ್ಕೆ ಸರ್ಕಾರ ಮುಂದಾಗಬೇಕಿದೆ.
100 ಬೆಡ್ ಹೊಂದುವ ತಾಲೂಕು ಆಸ್ಪತ್ರೆ ಆಗಿ ಇದು ನಿರ್ಮಾಣವಾಗಬೇಕು, ಆಸ್ಪತ್ರೆಯಲ್ಲಿ ಎಲ್ಲ ವಿಧವಾದ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲು 10 ವೈದ್ಯರನ್ನು ನಿಯೋಜಿಸಬೇಕು, ಆಸ್ಪತ್ರೆಗೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಬೇಕು. ಬಡವರಿಗೆ ಸೂಕ್ತ ಚಿಕಿತ್ಸೆ ದೊರೆಯುವ ನಿಟ್ಟಿನಲ್ಲಿ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಾಯ.
ಬಿರುಕು ಬಿಟ್ಟ ಕಟ್ಟಡ: ಸಾಲಿಗ್ರಾಮ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈಗಿರುವ ಕಟ್ಟಡ ಶಿಥಿಲವಾಗುತ್ತಿದ್ದು, ಗಾರೆ ಅಲ್ಲಲ್ಲಿ ಕಿತ್ತು ಬರುತ್ತಿದೆ. ಕಿತ್ತುಬಂದ ಜಾಗದಲ್ಲಿ ಮತ್ತೆ ಗಾರೆ ಹಾಕಿ ತೇಪೆ ಹಾಕಲಾಗುತ್ತಿದೆ. ಇದರಿಂದ ರೋಗಿಗಳು ಕಾಯಿಲೆ ವಾಸಿ ಮಾಡಿಕೊಳ್ಳಲದೆ ಆಸ್ಪತ್ರೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಹೆರಿಗೆ ಕೊಠಡಿಗಳು ಮಳೆಯ ನೀರಿನಿಂದ ಸೋರುತ್ತಿದ್ದು ಅಪಾಯದ ಅಂಚಿನಲ್ಲಿವೆ. ಹೆಚ್ಚು ಮಳೆ ಸುರಿದರೆ ಜೀವಭಯದಲ್ಲಿ ರೋಗಿಗಳು ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸುಸಜ್ಜಿತ ತಾಲೂಕು ಮಟ್ಟದ ಆಸ್ಪತ್ರೆ ನಿರ್ಮಾಣ ಮಾಡಲು ಜನಪ್ರತಿನಿಧಿಗಳು ಆಸಕ್ತಿ ತೋರಬೇಕಿದೆ.
ಡೆಲಿವರಿ ವ್ಯವಸ್ಥೆ ಗರ್ಭಿಣಿಯರ ಗೋಳು: ಆಸ್ಪತ್ರೆಯಲ್ಲಿ ಹೆರಿಗೆ ವ್ಯವಸ್ಥೆ ಇಲ್ಲದೆ ಗರ್ಭಿಣಿಯರು ಪರದಾಡುವ ಪರಿಸ್ಥಿತಿಯಿದೆ. ಡಾ.ದರ್ಶನ್ ಇದ್ದಾಗ ಹೆರಿಗೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅವರು ಇತ್ತೀಚೆಗೆ ವರ್ಗಾವಣೆಯಾದ ಬಳಿಕ ಮತ್ತೆ ಸಮಸ್ಯೆ ಎದುರಾಗಿತ್ತು. ಕ್ಷೇತ್ರದ ಶಾಸಕರು ಪ್ರಸೂತಿ ತಜ್ಞೆಯೊಬ್ಬರನ್ನು ನಿಯೋಜನೆ ಮಾಡಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಸ್ವಲ್ಪ ಬಗೆಹರಿದಿದೆ.
ರಕ್ಷಾ ಕಮಿಟಿ ರಚನೆ ಇಲ್ಲ: ಆಸ್ಪತ್ರೆಗಳ ಅಭಿವೃದ್ಧಿಗಾಗಿ ಪ್ರತಿ ಆಸ್ಪತ್ರೆಯಲ್ಲೂ ರಕ್ಷ ಸಮಿತಿ ರುತ್ತದೆ. ಆದರೆ ಇಲ್ಲಿ ಹಳೆಯ ಸಮಿತಿ ಅಧಿಕಾರದ ಅವಧಿ ಮುಗಿದಿದ್ದರೂ ಹೊಸ ರಕ್ಷಾ ಸಮಿತಿಯನ್ನು ಇದುವರೆಗೂ ಮಾಡಿಲ್ಲ. ಇದರಿಂದ ಆಸ್ಪತ್ರೆಯ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ರಕ್ಷಾ ಸಮಿತಿ ಆಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ತುಕ್ಕು ಹಿಡಿಯುತ್ತಿರುವ ಆಂಬುಲೆನ್ಸ್: ತಾಲೂಕು ಕೇಂದ್ರವಾಗಿರುವ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ಆಂಬುಲೆನ್ಸ್ ಕೆಟ್ಟು ತುಕ್ಕು ಹಿಡಿಯುತ್ತಿದೆ. ಹಳೆಯ ಆಂಬುಲೆನ್ಸ್ ಉಪಯೋಗಕ್ಕೆ ಬಾರದಂತಾಗಿದೆ. ಒಂದು ಆಂಬುಲೆನ್ಸ್ ಮಾತ್ರ ಬಳಕೆಯಲ್ಲಿದೆ. ಇದರಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲು ಸಾಧ್ಯವಾಗುತ್ತಿಲ್ಲ. ಕೆಟ್ಟು ನಿಂತಿರುವ ಆಂಬುಲೆನ್ಸ್ ಅನ್ನು ಕೂಡಲೇ ರಿಪೇರಿ ಮಾಡಿಸಬೇಕಿದೆ. ಜಿಲ್ಲೆಯ ಕೊನೆಯ ಭಾಗವಾಗಿರುವ ಸಾಲಿಗ್ರಾಮ ತಾಲೂಕಿಗೆ ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕಿನ ಕೊನೇ ಭಾಗದ ರೋಗಿಗಳು ಹೆಚ್ಚಾಗಿ ಬರುತ್ತಿದ್ದು, ಆಸ್ಪತ್ರೆಯಲ್ಲಿ ಮೂಲಸೌಕರ್ಯವಿಲ್ಲದೆ ಹಿಡಿಶಾಪ ಹಾಕುತ್ತಿದ್ದಾರೆ. ಇಂದಿಗೂ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ. ಶೌಚಗೃಹ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದು ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕಿದೆ.
ಸಾಲಿಗ್ರಾಮ ತಾಲೂಕು ಆಸ್ಪತ್ರೆಯನ್ನು 100 ಬೆಡ್ ಮಾಡಿ ಮೇಲ್ದರ್ಜೆಗೇರಿಸಬೇಕು. ತಾಲೂಕು ಕೇಂದ್ರವಾಗಿ ಮೂರು ವರ್ಷಗಳಾಗಿದೆ. ಉತ್ತಮ ಚಿಕಿತ್ಸೆ ಪಡೆಯಲು ರೋಗಿಗಳು ಹರಸಾಹಸಪಡುತ್ತಿದ್ದಾರೆ. ನೂತನ ಶಾಸಕರ ಮೇಲೆ ಭರವಸೆ ಇದೆ. ಕೂಡಲೇ ಮೇಲ್ದರ್ಜೆಗೇರಿಸಿದರೆ ರೋಗಿಗಳಿಗೆ ಅನುಕೂಲವಾಗುತ್ತದೆ.
ವಾಸಿಂ ಸಾಲಿಗ್ರಾಮ ನಿವಾಸಿ
ಸಾಲಿಗ್ರಾಮ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರವಾಗಿದ್ದು ನಾಲ್ಕು ವೈದ್ಯರು ಮಾತ್ರ ಇದ್ದಾರೆ. ಆದರೆ ದಿನನಿತ್ಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕಾಗಿದೆ. ಈಗಾಗಲೇ ಕ್ರಿಯೆಯೋಜನೆ ಸರ್ಕಾರದ ಮಟ್ಟದಲ್ಲಿದೆ. 100 ಬೆಡ್ ಆಸ್ಪತ್ರೆ ಆದರೆ ಹತ್ತು ಜನ ವೈದ್ಯರು ಇರುತ್ತಾರೆ. ಆದರೂ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳನ್ನೂ ತಪಾಸಣೆ ಮಾಡಲಾಗುತ್ತಿದೆ. ಯಾರನ್ನೂ ವಾಪಸ್ ಕಳುಹಿಸುತ್ತಿಲ್ಲ.
ಡಾ.ಮಂಜುನಾಥ್
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರ.