

| ಹರೀಶ್ ಬೇಲೂರು ಬೆಂಗಳೂರು
ಕಳೆದ ಹದಿನೈದು ತಿಂಗಳಿಂದ ಕೂರುವುದೇ ಕಾಯಕ! ಕೆಲಸ ಮಾಡದೇ ಇದ್ದರೂ ಪ್ರತಿ ತಿಂಗಳ ವೇತನ ಬ್ಯಾಂಕ್ ಖಾತೆಗೆ ಸೇರುತ್ತಿದೆ. ಸ್ಥಳ ನಿಯುಕ್ತಿ ಆದೇಶ ಈಗ ಬರಬಹುದು, ಆಗ ಬರಬಹುದೆಂದು 25 ಅಧಿಕಾರಿಗಳು ಕಾದು ಕಾದು ಸುಸ್ತಾಗಿದ್ದಾರೆ. ಸರ್ಕಾರದ ಈ ಎಡವಟ್ಟಿನಿಂದಾಗಿ ವಾರ್ಷಿಕ ಅಂದಾಜು ಎರಡೂವರೆ ಕೋಟಿ ರೂ. ಖಜಾನೆಗೆ ನಷ್ಟವಾಗಿದೆ. ನಗರಾಭಿವೃದ್ಧಿ (ಪೌರಾಡಳಿತ) ಇಲಾಖೆಯ ಹಿರಿಯ ಅಧಿಕಾರಿಗಳನ್ನು ದಿನದ ಮಟ್ಟಿಗೆ ಒಂದು ಸ್ಥಳಕ್ಕೆ ನಿಯುಕ್ತಿ ಗೊಳಿಸಿರುವ ಪ್ರಕರಣದ ಬೆನ್ನಲ್ಲೇ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಮತ್ತೊಂದು ಎಡವಟ್ಟು ಬಯಲಾಗಿದೆ. ವರ್ಗಾವಣೆಗೊಂಡಿರುವ 25 ಅಧಿಕಾರಿಗಳಿಗೆ ಕಳೆದೊಂದು ವರ್ಷದಿಂದ ಸ್ಥಳ ನಿಯುಕ್ತಿಗೊಳಿಸದೆ, ಯಾವ ಕೆಲಸವನ್ನೂ ಮಾಡಿಸದೆ ವೇತನ ಕೊಡಲಾಗುತ್ತಿದೆ.
ಡೀಲ್ ಆಗದೆ ಪೋಸ್ಟಿಂಗ್ ಇಲ್ಲ?: 2023ರ ಮಾರ್ಚ್, ಏಪ್ರಿಲ್ನಲ್ಲಿ ವರ್ಗಾವಣೆಯಾಗಿದ್ದ ಒಬ್ಬರು ನಗರ ಯೋಜಕರು, 6 ಸಹಾಯಕ ನಿರ್ದೇಶಕರು, 3 ಉಪ ನಿರ್ದೇಶಕರು, 14 ಜಂಟಿ ನಿರ್ದೇಶಕರು ಹಾಗೂ ಒಬ್ಬ ಅಪರ ನಿರ್ದೇಶಕರು ಸೇರಿ ಒಟ್ಟು 25 ಅಧಿಕಾರಿಗಳು ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದಾರೆ. ಹಣಕಾಸು ಒಪ್ಪಂದ ಕುದುರದ ಕಾರಣಕ್ಕೆ ಸ್ಥಳ ನಿಯೋಜನೆ ಆಗುತ್ತಿಲ್ಲ. ಹೀಗಾಗಿ ಇವರೆಲ್ಲರೂ ನಗರಾಭಿವೃದ್ಧಿ ಸಚಿವಾಲಯದಲ್ಲಿ ವರದಿ ಮಾಡಿಕೊಂಡು ಕೆಲಸವಿಲ್ಲದೆ ವೇತನ ಪಡೆಯುವಂತಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
ಅಧಿಕಾರಿಗಳ ಪಟ್ಟಿ: ಮಹಂತೇಶ್ (ನಗರ ಯೋಜಕರು), ವಿಕ್ರಮ್ ಸಿ.ಗಡೇಗಾರ, ಎ.ಬಿ.ಗುರುಪ್ರಸಾದ್, ಎಂ.ರಚನ, ಅಂಜನ್ ಹಳೇಮನೆ, ಡಿ.ದೀಪಕ್ ರಾಜ್, ವಿಕಾಶ್, (ಸಹಾಯಕ ನಿರ್ದೇಶಕರು), ಭಂಡಾರಿ ಎಸ್. ವಿಷ್ಣು, ಪ್ರಮೋದ್ ವಿ.ಶೇಟ್, ಶಿವರಾಜ ಶಂಕರ್ ಗಸಿ (ಉಪ ನಿರ್ದೇಶಕರು), ಎಚ್.ಎನ್. ರಘು, ಎಂ.ಎಸ್.ಶಾಂತಲ, ಬಿ.ರಾಧಾ, ಶೈಲೇಂದ್ರ ಸಿಂಗ್, ಮಹದೇವ್ ಪ್ರಸಾದ್, ಕೆ.ಎನ್. ನಾಗರಾಜ, ಸದಾನಂದ ಆಚಾರ್ಯ, ನಾಗರತ್ನ, ಬಿ.ಮಂಜೇಶ್, ಎಚ್.ಸುರೇಶ್, ಎನ್.ಎಂ.ನಂಜೇಗೌಡ, ಎಚ್. ವಿ.ಸೀಮಾ, ಜೆ.ಮಂಜುನಾಥ, ಕೆ.ಎ.ಶಾಂತರಾಜು (ಜಂಟಿ ನಿರ್ದೇಶಕರು), ಎಸ್.ಎಲ್. ರಾಜಣ್ಣ (ಅಪರ ನಿರ್ದೇಶಕರು).
2.40 ಕೋಟಿ ರೂಪಾಯಿ ನಷ್ಟ: ಒಬ್ಬ ಉಪ ನಿರ್ದೇಶಕರು ಅಥವಾ ಅಪರ ನಿರ್ದೇಶಕರಿಗೆ ಪ್ರತಿ ತಿಂಗಳು 1.50 ಲಕ್ಷ ರೂ. ವೇತನ ಇದೆ. ಅದರಂತೆ 4 ಅಧಿಕಾರಿಗಳಿಗೆ ವರ್ಷಕ್ಕೆ ಅಂದಾಜು 72 ಲಕ್ಷ ರೂ. ಆಗುತ್ತದೆ. ಅದೇ ರೀತಿ, ಒಬ್ಬ ಜಂಟಿ ನಿರ್ದೇಶಕರಿಗೆ 80 ಸಾವಿರ ರೂ.ನಂತೆ 21 ಅಧಿಕಾರಿಗಳಿಗೆ ವರ್ಷಕ್ಕೆ 1.68 ಕೋಟಿ ರೂ.ಆಗುತ್ತಿದೆ. ಸ್ಥಳ ನಿಯುಕ್ತಿ ಮಾಡದ ಪರಿಣಾಮ ಕೆಲಸ ಮಾಡದಿದ್ದರೂ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 2.40 ಕೋಟಿ ರೂ. ನಷ್ಟವಾಗಿದೆ.
* ಭ್ರಷ್ಟಾಚಾರ, ಲಂಚ ಪಡೆಯುವ ವೇಳೆ ಟ್ರಾ್ಯಪ್ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣಗಳಲ್ಲಿ ದಾಳಿಗೆ ಒಳಗಾಗಿ ಅಮಾನತಾದ ಹತ್ತಾರು ಅಧಿಕಾರಿಗಳು ಮತ್ತೆ ಲಾಭದಾಯಕ ಹುದ್ದೆಯಲ್ಲಿ ಕುಳಿತು ಕಾರ್ಯಾಭಾರ ಮಾಡುತ್ತಿರುವ ಪ್ರಕರಣಗಳು ಸರ್ಕಾರಿ ಇಲಾಖೆಗಳಲ್ಲಿ ಹೆಚ್ಚಿವೆ
* ಅಬಕಾರಿ, ನಗರಾಭಿವೃದ್ಧಿ, ಬಿಬಿಎಂಪಿ, ಸಾರಿಗೆ ಸೇರಿ ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಈ ದಂಧೆ ಹೆಚ್ಚಾಗಿ ನಡೆಯುತ್ತಿರುವ ಆರೋಪ ಇದೆ
*ಆರೋಪಿ ಅಧಿಕಾರಿಗಳು, ಸಿಬ್ಬಂದಿಯನ್ನು ಲಾಭದಾಯಕ ಹುದ್ದೆಗಳಿಗೆ ನೇಮಿಸಬಾರದು ಮತ್ತು ಇಂಥವರಿಗೆ ನಾನ್ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ ಮಾತ್ರ ನೇಮಕ ಮಾಡಬೇಕೆಂದು ಸರ್ಕಾರದ ನಿಯಮ ಇದೆ. ಆದರೂ, ಪ್ರಭಾವ ಬಳಸಿ ಅಧಿಕಾರಿಗಳು ಹಿಂದೆ ಸೇವೆ ಸಲ್ಲಿಸಿದ್ದ ಹುದ್ದೆಗೆ ಬರುತ್ತಿದ್ದಾರೆ.
* ಸರ್ಕಾರಿ ನೌಕರರ ವರ್ಗಕ್ಕೆ ಮಾರ್ಗಸೂಚಿ ಇದೆ
* ಕಡ್ಡಾಯ ನಿರೀಕ್ಷಣಾವಧಿಯಲ್ಲಿ ಉಳಿಯಬಾರದು
* ಎಲ್ಲ ಸರ್ಕಾರಿ ನೌಕರರಿಗೂ ಈ ನಿಯಮ ಅನ್ವಯ
* ಎಲ್ಲ ಇಲಾಖೆ ಮುಖ್ಯಸ್ಥರಿಗೆ 2018ರಲ್ಲೇ ಆದೇಶ
* ಸ್ಪಷ್ಟ ನಿರ್ದೇಶನ ನೀಡಿದ್ದ ಮುಖ್ಯ ಕಾರ್ಯದರ್ಶಿ
* ಆದ್ರೂ ಪರ್ಯಾಯ ಹುದ್ದೆ ತೋರಿಸಲು ನಿರ್ಲಕ್ಷ್ಯ
* ನೌಕರರನ್ನು ಸುಮ್ಮನೆ ಕೂರಿಸುವುದರಿಂದ ನಷ್ಟ
* ನೌಕರರ ಕಾರ್ಯಕ್ಷಮತೆ ಮೇಲೆ ದುಷ್ಪರಿಣಾಮ
* ಸಾರ್ವಜನಿಕ ಕೆಲಸಗಳಿಗೂ ತೊಂದರೆ ಆಗಲಿದೆ
* ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಲಿದೆ
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ 25 ಅಧಿಕಾರಿಗಳಿಗೆ ವರ್ಷದಿಂದ ಸ್ಥಳ ನಿಯುಕ್ತಿಯಾಗದ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಈಗ ವಿಷಯ ಗೊತ್ತಾಗಿದೆ. ಎರಡು ದಿನದೊಳಗೆ ಅಧಿಕಾರಿಗಳಿಗೆ ಹುದ್ದೆ ತೋರಿಸಲು ಕ್ರಮಕೈಗೊಳ್ಳ ಲಾಗುವುದು. ವಿಳಂಬಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. | ಭೈರತಿ ಸುರೇಶ್ ನಗರಾಭಿವೃದ್ಧಿ ಸಚಿವ