

ಬೆಂಗಳೂರು:
ಸಾಲಮನ್ನಾ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2024-25ನೇ ಸಾಲಿನಲ್ಲಿ ಜೂನ್ ಅಂತ್ಯಕ್ಕೆ ಸಹಕಾರ ಸಂಘಗಳು ಹೊಸದಾಗಿ ಅರ್ಜಿ ಸಲ್ಲಿಸಿದ 9797 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 93.49 ಕೋಟಿ ರೂ ಬೆಳೆ ಸಾಲ ಮತ್ತು 2815 ರೈತರಿಗೆ 138.36 ಕೋಟಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಲಾಗಿದೆ ಎಂದರು.
ಕಳೆದ ಸಾಲಿನಲ್ಲಿ 29,26,910 ರೈತರಿಗೆ 22,982.10 ಕೋಟಿ ಬೆಳೆ ಸಾಲ, 54,255 ರೈತರಿಗೆ 1517.77 ಕೋಟಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ಸೇರಿ ಒಟ್ಟು 29,81,165 ರೈತರಿಗೆ 24,444.87 ಕೋಟಿ ರೂ ಕೃಷಿ ಸಾಲ ವಿತರಿಸಲಾಗಿದೆ ಎಂದರು.
2024-25ನೇ ಸಾಲಿಗೆ ಸುಮಾರು 2566.02 ಕೋಟಿ ರೂ ಕೃಷಿ ಸಾಲ ವಿತರಿಸಲು ಕ್ರಮ ವಹಿಸಲಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 7,80,363 ಅರ್ಜಿಗಳಿಗೆ 6799.17 ಕೋಟಿ ಸಾಲ ವಿತರಣೆ ಮಾಡಲಾಗಿದೆ.
ನೀವು ಸುಮ್ಮನೆ ಸಾಲ ಮನ್ನಾ ಬಗ್ಗೆ ಮಾತನಾಡಬೇಡಿ. ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡಿಸಿ, ನಿಮ್ಮನ್ನ ನೋಡಿ ನಾವು ಕಲಿಯುತ್ತೇವೆ ಎಂದರು.
ರೈತರ ಹೆಸರನ್ನ ದುರುಪಯೋಗ ಪಡಿಸಿಕೊಂಡು ನೀವು ರಾಜಕೀಯ ಮಾಡಬೇಡಿ, ಮನಮೋಹನ್ ಸಿಂಗ್ ಕಾಲದಲ್ಲಿ ನಾವು ಸಾಲಮನ್ನಾ ಮಾಡಿದ್ದೇವೆ. ರಾಜ್ಯದಲ್ಲೂ ನಾವು ಸಾಲಮನ್ನ ಮಾಡಿದ್ದೇವೆ. ಆದರೆ, ಬಿಜೆಪಿಯವರು ಒಮ್ಮೆಯೂ ಸಾಲಮನ್ನ ಮಾಡಿಲ್ಲ, ಮೊದಲು ನೀವು ಸಾಲಮನ್ನ ಮಾಡಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ 1000 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲೆ ಆತ್ಮಹತ್ಯೆಯಲ್ಲಿ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಸಿ.ಟಿ.ರವಿ ಹೇಳಿದರು.