

ಶಿವಮೊಗ್ಗ: ಸೇವೆಯನ್ನು ಪ್ರೀತಿ ಮತ್ತು ಭಕ್ತಿಯಿಂದ ಮಾಡಿದಾಗ ಅದು ದಾನವಾಗುತ್ತದೆ. ಸಕ್ಷಮ ಸಂಸ್ಥೆ ಸಮರ್ಪಣಾ ಮನೋಭಾವದಿಂದ ಸೇವೆ ಮಾಡುತ್ತಾ ಬಂದಿದೆ ಎಂದು ಸಮಾಜಸೇವಕ ಉಮೇಶ್ ಶಾಸ್ತ್ರಿ ಹೇಳಿದರು.
ಶನಿವಾರ ಸಕ್ಷಮ ಸ್ಥಾಪನ್ ದಿವಸ್, ರಕ್ತದಾನಿಗಳ ದಿನಾಚರಣೆ, ಅಂಗವಿಕಲರಿಗೆ ಸಾಧನ ಸಲಕರಣೆ ಮತ್ತು ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಸರೇ ಹೇಳುವಂತೆ ಸಕ್ಷಮ ಸಮಾಜದ ಯೋಗಕ್ಷೇಮ ನೋಡಿಕೊಳ್ಳುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಅಂಗವಿಕಲರಿಗೆ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದರು.
ಆರ್‌ಎಸ್‌ಎಸ್‌ನ ಜಿಲ್ಲಾ ಸಂಘ ಚಾಲಕ ಬಿ.ಎ.ರಂಗನಾಥ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದುರ್ಬಲನಾಗಿರಬಾರದು ಎಂಬ ಉದ್ದೇಶದಿಂದ ಆರ್‌ಎಸ್‌ಎಸ್ ಸಕ್ಷಮ ಎಂಬ ಸಂಘಟನೆ ಸ್ಥಾಪಿಸಿ ಆ ಮೂಲಕ ಎಲ್ಲರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕುಮಾರ್ ಶಾಸಿ ಮಾತನಾಡಿ, ಆರ್‌ಎಸ್‌ಎಸ್ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಸಮಾಜದ ಹಲವು ಸಮಸ್ಯೆ ಬಗೆಹರಿಸಲು ಅನೇಕ ವಿಭಾಗಗಳನ್ನು ಸ್ಥಾಪಿಸಿ ತನ್ನದೆ ಆದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. 2008ರಲ್ಲಿ ಅಂಗವಿಕಲರಿಗಾಗಿ ಸಕ್ಷಮ ಎಂಬ ವಿಭಾಗ ಪ್ರಾರಂಭವಾಯಿತು ಎಂದು ಹೇಳಿದರು.
ಅಂಗವಿಕಲರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಸಕ್ಷಮ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಮೂರು ಸಾವಿರ ಅಂಗವಿಕಲರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕರೊನಾ ವೇಳೆ 150 ಅಂಗವಿಕಲರ ಕುಟುಂಬಗಳಿಗೆ 6 ತಿಂಗಳು ನಿರಂತರವಾಗಿ ಆಹಾರಧಾನ್ಯ ನೀಡಲಾಗಿತ್ತು ಎಂದರು.
ವಾಕರ್, ವ್ಹೀಲ್ ಚೇರ್, ಇಯರಿಂಗ್ ಏಡ್, ಸ್ಕೂಲ್ ಬ್ಯಾಗ್, ಬುದ್ಧಿಮಾಂದ್ಯ ಮತ್ತು ಅಂಗವಿಕಲ ಶಾಲಾ ಮಕ್ಕಳ ಕಲಿಕೆಗೆ ಬೇಕಾದ ಪರಿಕರಗಳನ್ನು ಕೂಡ ಸಂಸ್ಥೆ ಒದಗಿಸುತ್ತಿದೆ ಎಂದು ತಿಳಿಸಿದರು. ನಾಲ್ವರಿಗೆ ವ್ಹೀಲ್‌ಚೇರ್, 4 ವಾಟರ್‌ಬೆಡ್, ಸ್ಕೂಲ್ ಬ್ಯಾಗ್, ಕ್ಲಚಸ್‌ಗಳು, ವಾಕರ್‌ಗಳು, ಒಂದು ಬೈಸಿಕಲ್ ನೀಡಲಾಯಿತು.
ರೋಟರಿ ಮಿಡ್‌ಟೌನ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ನಟರಾಜ್, ಸಕ್ಷಮದ ದಕ್ಷಿಣ ಪ್ರಾಂತ ಕಾರ್ಯದರ್ಶಿ ನಾಗರಾಜ್, ಸಕ್ಷಮದ ಜಿಲ್ಲಾಧ್ಯಕ್ಷ ಭಾಸ್ಕರ್ ಜಿ.ಕಾಮತ್, ಪ್ರಮುಖರಾದ ಪ್ರವೀಣ್ ಶಾಸಿ, ಡಾ. ರಜನಿ ಪೈ, ಅಶ್ವತ್ಥನಾರಾಯಣ ಶೆಟ್ಟಿ, ಅಬ್ದುಲ್ ಮುಜೀಬ್ ಮತ್ತಿತರರಿದ್ದರು.