ಸಕ್ರೆಬೈಲ್ ನಲ್ಲಿ ಆನೆಗಳನ್ನೇ ಅಟ್ಟಾಡಿಸಿದ ಮದವೇರಿದ ಮಣಿಕಂಠ

Screenshot_20210104-153706_Gallery-696x385 (1)
Published on

ಶಿವಮೊಗ್ಗ: ಕಾಡಿನಲ್ಲಿ ಮದವೇರಿದ ಆನೆಗಳ ನಡುವೆ ಕಾದಾಟ ಆಗುವುದು ಸರ್ವೆ ಸಾಮಾನ್ಯ. ಆದರೆ ಜಿಲ್ಲೆಯ ಪ್ರವಾಸಿ ತಾಣವೂ ಆಗಿರುವ ಸಕ್ರೆಬೈಲ್‌ನ ಬಿಡಾರದಲ್ಲಿ ಮದವೇರಿದ ಮಣಿಕಂಠ ತುಂಗಾ ಜಲಾಶಯದ ಹಿನ್ನೀರಿನಲ್ಲೇ ಆನೆಗಳಿಗೆ ತಿವಿದು ಅಟ್ಟಾಡಿಸಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಆನೆ ದಾಂಧಲೆಗೆ ಸ್ವತಃ ಮಾವುತರು, ಕಾವಾಡಿಗರು ಹಾಗೂ ಪ್ರವಾಸಿಗರು ಹೌಹಾರಿದರು.
ಮಣಿಕಂಠ ಆತಂಕ ಸೃಷ್ಟಿಸಿ ಮದವೇರಿದ ಆನೆ. ಸಕ್ರೆಬೈಲ್‌ನಲ್ಲಿ ಬೆಳಗ್ಗೆಯೇ ಆನೆಗಳಿಗೆ ಸ್ನಾನ ಮಾಡಿಸುವುದು ನಿತ್ಯದ ಕಾಯಕ. ಎಂದಿನಂತೆ ಎಲ್ಲ ಆನೆಗಳನ್ನೂ ಬೆಳಗ್ಗೆಯೇ ತುಂಗಾ ಹಿನ್ನೀರಿಗೆ ಕರೆತರಲಾಗುತ್ತಿತ್ತು. ಈ ವೇಳೆ ಮದವೇರಿದ್ದ ಮಣಿಕಂಠನ
ಆರ್ಭಟದಿಂದ ನಾಗಣ್ಣ(ಆನೆ) ಗಾಯಗೊಂಡಿದ್ದಾನೆ. ದಂತದ ತಿವಿದಿಂದ ನಾಗಣ್ಣನಿಗೆ ಗಾಯಗಳಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿದೆ.
ಮಾವುತ ಮಣಿಕಂಠನನ್ನು ಹಿನ್ನೀರಿಗೆ ಕರೆತಂದಿದ್ದ. ನೀರಿಗೆ ಇಳಿದ ಮಣಿಕಂಠ ಏಕಾಏಕಿ ಪಕ್ಕದಲ್ಲೇ ಇದ್ದ ನಾಗಣ್ಣ ಮತ್ತು
ಮರಿಯಾನೆಯೊಂದರ ಮೇಲೆ ಆಕ್ರಮಣ ಮಾಡಿತ್ತು. ಏನಾಗುತ್ತಿದೆ ಎಂಬುದನ್ನು ಅರಿಯುವ ಮುನ್ನವೇ ಮಾವುತನ ನಿಯಂತ್ರಣಕ್ಕೂ ಸಿಗದಂತಾಗಿತ್ತು. ಈ ವೇಳೆಗಾಗಲೇ ನಾಗಣ್ಣ ಮತ್ತು ಮರಿಯಾನೆಗೆ ದಂತಗಳಿಂದ ನೂಕಿ ಗಾಯಗೊಳಿಸಿತ್ತು. ಇದರಿಂದ ಜೋರಾಗಿ ಕೂಗಿಕೊಂಡ ಆನೆಗಳು ಹಿನ್ನೀರಿನ ನಡುಗಡ್ಡೆ ಸಮೀಪ ತೆರಳಿದ್ದವು. ನಾಗಣ್ಣನ ಮೇಲಿದ್ದ ಮಾವುತ ಗೌಸ್ ನೀರಿಗೆ ಹಾರಿ ಜೀವ ಉಳಿಸಿಕೊಂಡಿದ್ದಾನೆ.
ನಾಗಣ್ಣನನ್ನು ಬೆನ್ನತ್ತಿದ ಮಣಿಮಂಠ:
ಅಷ್ಟಕ್ಕೆ ಸುಮ್ಮನಾಗದ ಮಣಿಮಂಠ, ಹಿನ್ನೀರಿನ ನಡುಗೆಡ್ಡೆಯಲ್ಲಿದ್ದ ನಾಗಣ್ಣನನ್ನು ಬೆನ್ನತ್ತಿ ಅಟ್ಟಾಸಿದೆ. ಸ್ವಲ್ಪ ಹೊತ್ತಿನ ಬಳಿಕ ಮಣಿಮಂಠ ಸಮಾಧಾನಗೊಂಡು ನೀರಿನಲ್ಲೇ ನಿಂತಿದ್ದ. ಎರಡು ಗಂಟೆಗಳ ಬಳಿಕ ಮಾವುತರು ಮತ್ತು ಕಾವಾಡಿಗಳು ಸಮಾಧಾನಗೊಂಡಿದ್ದ ಮಣಿಕಂಠನನ್ನು ನೀರಿನಿಂದ ಹೊರಗೆ ಕರೆತಂದು ಸರಪಳಿಯಿಂದ ಬಿಗಿದು ನಿಟ್ಟುಸಿರು ಬಿಟ್ಟಿದ್ದಾರೆ.
ಆತಂಕಗೊಂಡ ಪ್ರವಾಸಿಗರು:
ಆನೆ ಆರ್ಭಟವನ್ನು ಕಣ್ಣಾರೆ ಕಂಡ ಪ್ರವಾಸಿಗರು ಕೆಲ ಕಾಲ ಆತಂಕಗೊಂಡಿದ್ದರು. ಬಳಿಕ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ
ಪ್ರವಾಸಿಗರನ್ನು ಬಿಡಾರದಿಂದ ಹೊರಗೆ ಕಳುಹಿಸಿದರು. ಏಕಾಏಕಿ ಮಣಿಕಂಠನಿಗೆ ಮದವೇರಲು ಕಾರಣವೇನು ಎಂಬುದು ಮಾವುತರು ಮತ್ತು ಕಾವಾಡಿಗಳಿಗೂ ತಿಳಿಯದಂತಾಗಿದೆ. ಒಟ್ಟಾರೆ ಮಧ್ಯಾಹ್ನದ ವೇಳೆಗೆ ಶಾಂತವಾಗಿದ್ದ ಮಣಿಕಂಠನಿಗೆ ಎಂದಿನಂತೆ ಆಹಾರ ನೀಡಿ
ಕಾಡಿಗೆ ಕಳುಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net