

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಗುರುವಾರ(ಜನವರಿ 16) ಚಾಕುವಿನಿಂದ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏತನ್ಮಧ್ಯೆ ಸೈಫ್ ಅಲಿ ಖಾನ್ ಅವರ ಆರೋಗ್ಯದ ಅಪ್ಡೇಟ್(Saif Ali Khan Health Update) ಬಿಡುಗಡೆಯಾಗಿದೆ. ಸದ್ಯ ಸೈಫ್ ಅಲಿ ಖಾನ್ ಅವರನ್ನು ಐಸಿಯುನಿಂದ ವಿಶೇಷ ಕೊಠಡಿಗೆ ಶಿಫ್ಟ್ ಮಾಡಲಾಗಿದೆ. ಅವರ ಆರೋಗ್ಯದ ಬಗ್ಗೆ ವೈದ್ಯರು ಕೊಟ್ಟ ಮಾಹಿತಿ ಹೀಗಿದೆ.
ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ನಡೆದ ಬಳಿಕ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆಯ ನಂತರ ಅವರು ಐಸಿಯುನಲ್ಲಿದ್ದರು. ಈಗ ವೈದ್ಯರು ಸೈಫ್ ಅಲಿ ಖಾನ್ ಅವರಿಗೆ ಒಂದು ವಾರ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಲಾಗಿದ್ದು ಈ ಅವಧಿಯಲ್ಲಿ ಅವರು ನಡೆಯದಂತೆ ಹೇಳಲಾಗಿದೆ ಎಂದು ಹೇಳಿದರು.
ಸೈಫ್ ಅಲಿಖಾನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಡಾ.ನಿತಿನ್ ಡಾಂಗೆ, ಸೈಫ್ ಅವರ ಬೆನ್ನುಮೂಳೆ ಕೇವಲ 2 ಮಿಮೀ ಮಾತ್ರ ಉಳಿದಿದೆ, ಅವರನ್ನು ಐಸಿಯುನಿಂದ ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರ ಸ್ಥಿತಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಸೈಫ್ ಅಲಿಖಾನ್ಗೆ ಒಂದು ವಾರ ಯಾವುದೇ ಚಲನೆ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಆದರೆ ಸೈಫ್ ಅಲಿಖಾನ್ ಅವರಿಗೆ ಇನ್ನೂ ಸೋಂಕಿನ ಅಪಾಯವಿದೆ. ಆದ್ದರಿಂದ ಜನರು ಆಸ್ಪತ್ರೆಗೆ ಬರುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ದಾಳಿಯಲ್ಲಿ ಚಾಕು ಆಳಕ್ಕೆ ಹೋಗಿದ್ದರೆ ಗಂಭೀರ ಸಮಸ್ಯೆಗಳು ಸಂಭವಿಸುತಿತ್ತು. ವಾಸ್ತವವಾಗಿ ಚಾಕುವಿನ 2.5 ಇಂಚಿನ ತುಂಡು ನಟನ ಬೆನ್ನಿಗೆ ಹೋಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಆ ಎರಡು ಇಂಚಿನ ಚಾಕುವನ್ನು ಹೊರತೆಗೆಯಲಾಗಿದೆ. ಆದರೆ ಈ ಚಾಕು 2 ಮಿಮೀ ಆಳಕ್ಕೆ ಹೋಗಿದ್ದರೆ ಪಾರ್ಶ್ವವಾಯು ಸಂಭವಿಸುವ ಅವಕಾಶ ಹೆಚ್ಚಿತ್ತು. ಸೈಫ್ ಈಗ ಅಪಾಯದಿಂದ ಪಾರಾಗಿದ್ದಾರೆ. ಅದೇ ಸಮಯದಲ್ಲಿ ಅವರ ದೇಹದಲ್ಲಿ ನಾಲ್ಕು ಸಣ್ಣ ಗಾಯಗಳಾಗಿದ್ದು ನಂತರ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಈಗ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.(ಏಜೆನ್ಸೀಸ್)