

ಕೋಲಾರ: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2024ನೇ ಸಾಲಿನ ಪ್ರಶಸ್ತಿ ಪ್ರಕಟಿಸಿದ್ದು, ಜಿಲ್ಲೆಯ ಸಾಹಿತ್ಯಶ್ರೀ ಪ್ರಶಸ್ತಿಗೆ ಪದ್ಮಾಲಯ ನಾಗರಾಜ್ ಆಯ್ಕೆಯಾಗಿದ್ದಾರೆ.
ಪದ್ಮಾಲಯ ನಾಗರಾಜ್ ಅವರು ಜಿಲ್ಲೆಯ ಮಾಲೂರು ತಾಲೂಕಿನ ಹುಲಿಮಂಗಲ ಗ್ರಾಮದವರು. ಶಿಕ್ಷಕರಾಗಿ ಸೇವೆ ಜತೆಗೆ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಪರೂಪದ ಸಾಂಸತಿಕ ಚಿಂತಕರು ಮತ್ತು ಸಂಶೋಧಕರು. ಬೌದ್ಧ ಧರ್ಮದ ಪ್ರತಿತ್ಯಾ ಸಮತ್ಪಾದ, ಆರ್ಯ ಅಷ್ಟಾಂಗ ಮಾರ್ಗದ ಮೂಲ ತತ್ವಗಳನ್ನು ಹೊಸ ತಲೆಮಾರುಗಳಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತಿರುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಕನ್ನಡ ಸಾಹಿತ್ಯದ ಚಿಂತಕರು, ಸಂಶೋಧಕರು, ಅಚಲಮಾರ್ಗಿಗಳು ಮತ್ತು ತತ್ವಸಾಧಕರು. ಅವರು ಅಚಲ ಗುರು ಮಾರ್ಗ ಎಂಬ ಮಹತ್ವದ ಕೃತಿ ಸೇರಿ ಹಲವು ಪುಸ್ತಕ ರಚನೆ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನ ಅಚಲ ತತ್ವಪದಗಳನ್ನು ಸಂಪುಟಗಳಲ್ಲಿ ಸಂಪಾದಿಸುತ್ತಿದ್ದಾರೆ. ತಲೆಮಾರು ಕುಟೀರದ ನಾಟಿ ವೈದ್ಯರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.
ಶಿಕ್ಷಕ ವೃತ್ತಿಯಿಂದ 2 ತಿಂಗಳ ಹಿಂದಷ್ಟೇ ನಿವೃತ್ತರಾಗಿ ಪುಸ್ತಕ ಬರೆಯುವತ್ತ ಹೊರಳಿದ್ದಾರೆ. ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವು 25 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದ್ದು, ನವೆಂಬರ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
* ಸರಿಯಾದ ಕಾಲದಲ್ಲಿ ಗುರುತಿಸದ ಬೇಸರ
ಜೀವಮಾನ ಸಾಧನೆಗಾಗಿ ಪ್ರಶಸ್ತಿ ಸಿಕ್ಕಿದೆ, ಸಂತಸವಾಗಿದೆ. ಪ್ರಶಸ್ತಿಯ ಕಡತವು ಮೂರು ವರ್ಷಗಳಿಂದ ಸಮಿತಿ ಮುಂದಿತ್ತು, ಜಾತಿ ಲೆಕ್ಕಚಾರದಲ್ಲಿ ಕೆಳಗೆ ಹೋಗುತ್ತಿತ್ತು ಎಂದು ಪದ್ಮಾಲಯ ನಾಗರಾಜ್ ಬೇಸರಿಸಿದರು.
ಅಚಲ ಗುರು ಮಾರ್ಗ ಬರೆದಾಗ ವಿವಿಗಳಲ್ಲಿ ಪಠ್ಯ ಕ್ರಮವಾಗಿಸಲು ಹೋರಾಟ ನಡೆದಿತ್ತು. ಈಗಾಗಲೇ ಬರೆದಿರುವ 16 ಪುಸ್ತಗಳನ್ನು ಪಿಎಚ್.ಡಿ ವಿದ್ಯಾರ್ಥಿಗಳು ಸಂಶೋಧನೆ ಮಾಡಿದ್ದಾರೆ. ಸರಿಯಾದ ಕಾಲದಲ್ಲಿ ಗುರುತಿಸದೆ ಇದ್ದುದರಿಂದ ಮತ್ತಷ್ಟು ಪುಸ್ತಕ ಬರೆಯಲು ಆಸ್ತಕಿ ಬರಲಿಲ್ಲ. ನಮ್ಮ ಬಸವಣ್ಣ, ನನ್ನ ಓದು, ಬುದ್ಧ ಗುರುವಿನ ಹಾದಿಯಲ್ಲಿ ಪುಸ್ತುಗಳು 3&4 ವರ್ಷಗಳಿಂದ ಬಾಕಿ ಇದ್ದು ಬಿಡುಗಡೆ ಮಾಡಲಾಗುವುದು. ಕನಕ ಅಧ್ಯಯನ ಪೀಠಕ್ಕೆ 8 ಸಂಪುಟ ದಾಖಲೀಕರಣ ಮಾಡಿಕೊಟ್ಟಿರುವೆ. ಇದಕ್ಕೂ ಮುಂಚೆ ಕೊಟ್ಟಿದ್ದರೆ ಹೆಚ್ಚು ಪುಸ್ತಕ ರಚನೆ ಮಾಡಲು ಆಸಕ್ತಿ ಬರುತ್ತಿತ್ತು ಎಂದರು.