

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಮತ್ತು ಯುವ ಪುರಸ್ಕಾರಕ್ಕೆ ಆಯ್ಕೆಯಾದವರ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡದ ಇಬ್ಬರು ಲೇಖಕರು ಈ ಪಟ್ಟಿಯಲ್ಲಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಲೇಖಕಿ ವಿಜಯಶ್ರೀ ಹಾಲಾಡಿ ಅವರ 'ಸೂರಕ್ಕಿ ಗೇಟ್' ಕಾದಂಬರಿ ಆಯ್ಕೆ ಆಗಿದೆ. ಡಾ.ಜಯಶ್ರೀ ಸಿ. ಕಂಬಾರ್, ಡಾ.ಆನಂದ ವಿ. ಪಾಟೀಲ್, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬಾಲ ಸಾಹಿತ್ಯ ಪುರಸ್ಕಾರ ಕನ್ನಡ ವಿಭಾಗದ ತೀರ್ಪುಗಾರರಾಗಿದ್ದರು.
ಹಾಗೆಯೇ ಯುವ ಪುರಸ್ಕಾರಕ್ಕೆ ಮಂಜು ನಾಯಕ್ ಚಳ್ಳೂರು ಅವರ 'ಫೂ ಮತ್ತು ಇತರ ಕಥೆಗಳು' ಆಯ್ಕೆ ಆಗಿವೆ. ಡಾ.ಎಚ್.ಎಸ್. ರಾಘವೇಂದ್ರ ರಾವ್, ಡಾ.ಕೆ.ಮರುಳಸಿದ್ದಪ್ಪ, ಎಂ.ಆರ್.ಕಮಲಾ ಅವರು ಯುವ ಪುರಸ್ಕಾರದ ಕನ್ನಡ ವಿಭಾಗಕ್ಕೆ ತೀರ್ಪುಗಾರರಾಗಿದ್ದರು.
ಎರಡೂ ಪುರಸ್ಕಾರಕ್ಕೆ ಸ್ಮರಣಿಕೆ ಮತ್ತು ತಲಾ 50 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಸದ್ಯದಲ್ಲೇ ಪುರಸ್ಕಾರ ಪ್ರದಾನವಾಗಲಿದ್ದು, ಆ ಕುರಿತ ವಿವರ ಶೀಘ್ರದಲ್ಲೇ ತಿಳಿಸುವುದಾಗಿ ಅಕಾಡೆಮಿ ತಿಳಿಸಿದೆ.