"ಬಡ್ಡಿಮಗನ್ ಲೈು' "ಅನಾವರಣ', ಮಹಿಳಾ ಪ್ರಧಾನ ಸ್ಪೋರ್ಟ್ಸ್ ಡ್ರಾಮಾ "ಸಹಾರ', ತುಳು ಭಾಷೆಯ "ಲವ್ ಕಾಕ್ಟೇಲ್', "ಪೊಲೀಸ್ ಫೈಲ್ಸ್' ವೆಬ್ಸರಣಿ ಸೇರಿ ಕೆಲ ಚಿತ್ರಗಳಲ್ಲಿ ಮಿಂಚಿರುವ ಹೆಗ್ಗಳಿಕೆ ನಟಿ ಸಾರಿಕಾ ರಾವ್ಗೆ ಸಲ್ಲುತ್ತದೆ. "ಸಹಾರ' ಬಳಿಕ ಮಹಿಳಾ ಪ್ರಧಾನ ಚಿತ್ರಗಳತ್ತ ಗಮನ ಹರಿಸಿರುವ ಅವರು, ಇದೀಗ "ಮೃತ್ಯುದೇವತೆ'ಯಾಗಿ ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ. "ಜಾಲತಾಣದಲ್ಲಿ ೋಟೋಗಳನ್ನು ನೋಡಿ ನಿರ್ದೇಶಕ ನವೀನ್ ಮಹದೇವ್ ಸಂಪರ್ಕಿಸಿದರು. ಕಥೆ ಕೇಳಿದೆ, ಇಷ್ಟವಾಯಿತು. ನಾನಿಲ್ಲಿ ಕೇವಲ ಹತ್ತಿಪ್ಪತ್ತು ನಿಮಿಷ ಹಾಗೆ ಬಂದು ಹೀಗೆ ಹೋಗುವ ಪಾತ್ರದಲ್ಲಿಲ್ಲ. ಬದಲಾಗಿ ಫೈಟ್ ಮಾಡಿದ್ದೇನೆ, ನನಗಾಗಿಯೇ ಹಾಡುಗಳಿವೆ, ಚಿತ್ರದ ಪ್ರಾರಂಭದಿಂದ ಕ್ಲೆಮ್ಯಾಕ್ಸ್ವರೆಗೂ ಇದ್ದೇನೆ. ನನ್ನ ಪಾತ್ರದ ಹೆಸರು ಆರತಿ. ಆಕೆ ಡೆಲಿವರಿ ಗರ್ಲ್ ಕೆಲಸ ಮಾಡುತ್ತಿರುತ್ತಾಳೆ. ಹಳ್ಳಿ, ಪ್ರಕೃತಿ, ಪ್ರಾಣಿಗಳು ಅಂದರೆ ಆಕೆಗೆ ಇಷ್ಟ. ಫ್ರೆಂಡ್ಸ್ ಜತೆ ಒಮ್ಮೆ ಆಕೆ ಪ್ರವಾಸ ಹೋದಾಗ ಏನು ನಡೆಯುತ್ತದೆ ಎಂಬುದೇ "ಮೃತ್ಯುದೇವತೆ' ಕಥೆ. ನಾನು ಈ ಚಿತ್ರದಲ್ಲಿ ಕಾಳಿಯ ಗೆಟಪ್ನಲ್ಲೂ ಕಾಣಿಸಿಕೊಂಡಿದ್ದೇನೆ. ಅದು ನನಗೆ ವಿಶೇಷ ಅನುಭವ. ಆ ಗೆಟಪ್ನಲ್ಲಿ ಎರಡು ದಿನ ನೈಟ್ ಶೂಟ್ ಇತ್ತು. ರಾತ್ರಿ 7ಕ್ಕೆ ಸೆಟ್ಗೆ ಹೋದರೆ, ರಾತ್ರಿ 9ರವರೆಗೆ ಮೇಕಪ್ ಆಗುತ್ತಿತ್ತು. ಬಳಿಕ ಬೆಳಗ್ಗೆ 6ರವರೆಗೆ ಚಿತ್ರೀಕರಣ ನಡೆಯುತ್ತಿತ್ತು. ಮೇಕಪ್ನಲ್ಲಿ ಕ್ಯಾರಾವಾನ್ನಿಂದ ಹೊರಗೆ ಬರುತ್ತಿದ್ದಂತೆಯೇ, ನನ್ನನ್ನು ನೋಡಿ ಸೆಟ್ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಎಲ್ಲರೂ ಅಷ್ಟು ಶಾಕ್ ಆಗಿದ್ದರು. ದೇವಿಯ ಕಾಸ್ಟ್ಯೂಮ್ ಧರಿಸಿ ನಿಂಬೆಹಣ್ಣು ಮತ್ತು ಹೂವಿನ ಹಾರಗಳು, ಎರಡು ಕೆಜಿ ತೂಕದ ತ್ರಿಶೂಲ ಹಿಡಿದು ಸೆಟ್ಗೆ ಹೋದರೆ ಸಾಕು ನನ್ನಲ್ಲಿ ಎನರ್ಜಿ ಹೆಚ್ಚಾಗುತ್ತಿತ್ತು. ಬ್ರೇಕ್ ತೆಗೆದುಕೊಳ್ಳದೇ ಡಾನ್ಸ್ ಮಾಡಿದೆ. ಅಷ್ಟೊಂದು ಎನರ್ಜಿ ಹೇಗೆ ಸಾಧ್ಯ ಅಂತ ಗೊತ್ತಿಲ್ಲ. ಆದರೆ, ಟೇಕ್ ಮುಗಿದ ಬಳಿಕವೂ ಯಾರೂ ಬಂದು ನನ್ನನ್ನು ಮಾತನಾಡಿಸುತ್ತಿರಲಿಲ್ಲ. ನಿರ್ದೇಶಕರೂ ಹೆದರುತ್ತಿದ್ದರು. ಆ ರೌದ್ರತೆ ನನ್ನನ್ನು ಅಷ್ಟರ ಮಟ್ಟಿಗೆ ಆವರಿಸಿತ್ತು' ಎಂದು ಅನುಭವ ಹಂಚಿಕೊಳ್ಳುತ್ತಾರೆ ಸಾರಿಕಾ.