

ಮಂಡ್ಯ: ಜಿಲ್ಲಾದ್ಯಂತ ನ.14ರಿಂದ 20ರವರೆಗೆ ಸಹಕಾರ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಸುಂದ್ರಪ್ಪ ತಿಳಿಸಿದರು.
ಮಾಜಿ ಪ್ರಧಾನಿ ನೆಹರು ಜನ್ಮದಿನವಾದ ನ.14ರಿಂದ ಪ್ರಾರಂಭವಾಗುವ ಸಹಕಾರಿ ಸಪ್ತಾಹ ಏಳು ದಿನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸಪ್ತಾಹದ ಆಚರಣೆ ಸಂದರ್ಭದಲ್ಲಿ ಸಂಘದ ಕಟ್ಟಡಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಚಿಂತನ-ಮಂಥನ ಕೂಟಗಳನ್ನು ನಡೆಸುವುದು, ಸಂಘದ ನೈರ್ಮಲ್ಯದ ಬಗ್ಗೆ ಆಸಕ್ತಿ ವಹಿಸುವುದು, ಕಟ್ಟಡವನ್ನು ಸ್ವಚ್ಛವಾಗಿಡಲು ಶ್ರಮದಾನ, ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸಭೆ ಸಮಾರಂಭಗಳನ್ನು ನಡೆಸುವುದು, ಸಹಕಾರಿಗಳಿಗೆ ಉಪಯುಕ್ತವಾಗುವ ಆರೋಗ್ಯ ಯೋಜನೆಯಡಿ ಆರೋಗ್ಯ ಉಚಿತ ತಪಾಸಣೆ, ರಕ್ತದಾನ ಶಿಬಿರ, ಗಿಡ ನೆಡುವುದು, ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
14ರಂದು ಪಾಂಡವಪುರ ತಾಲೂಕು ನ್ಯಾಮನಹಳ್ಳಿಯ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. 15ರಂದು ಕೆ.ಆರ್.ಪೇಟೆ ತಾಲೂಕು ಶಾರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಮಾರುಕಟ್ಟೆ ಗ್ರಾಹಕ ರೂಪಾಂತರ ಮತ್ತು ಮೌಲ್ಯವರ್ಧನೆ ದಿನ, 16ರಂದು ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಮರುನಿರ್ಮಿಸುವ ದಿನಾಚರಣೆ, 17ರಂದು ಮಂಡ್ಯ ತಾಲೂಕಿನ ಹೆಮ್ಮಿಗೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಆವಿಷ್ಕಾರ ಘೋಷಣೆ, ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ದಿನವನ್ನು ಆಚರಿಸಲಾಗುವುದು ಎಂದು ವಿವರಿಸಿದರು.
18ರಂದು ಶ್ರೀರಂಗಪಟ್ಟಣ ಟಿಎಪಿಸಿಎಂಎಸ್ ಆವರಣದಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಮತ್ತು ಸಾರ್ವಜನಿಕ, ಖಾಸಗಿ ಸಹಕಾರಿ ಸಹಭಾಗಿತ್ವವನ್ನು ಬಲಗೊಳಿಸುವ ದಿನಾಚರಣೆ, 19ರಂದು ಮಳವಳ್ಳಿ ಗಾಯತ್ರಿ ಸಭಾ ಭವನದಲ್ಲಿ ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ ದಿನ ಹಾಗೂ 20ರಂದು ಮದ್ದೂರು ತಾಲೂಕು ನೀಲಕಂಠನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಆರ್ಥಿಕ ಸೇರ್ಪಡೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಡಿಜಿಟಲೀಕರಣ ಮತ್ತು ಸಹಕಾರ ಸಂಸ್ಥೆಗಳ ದತ್ತಾಂಶವನ್ನು ಬಲಪಡಿಸುವ ದಿನ ಹಾಗೂ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಹಕಾರಿ ಇಲಾಖೆ ಉಪನಿರ್ದೇಶಕ ವಿಕ್ರಂರಾಜೇ ಅರಸ್, ಎ.ಆರ್. ನಾಗಭೂಷಣ್, ಸಹಕಾರಿಗಳಾದ ನಾಗೇಂದ್ರ, ಶಿವಕುಮಾರ್, ನಿಂಗೇಗೌಡ ಇದ್ದರು.