

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಸಹಕಾರ ಸಂಘಗಳಲ್ಲಿ ಸ್ವಯಂ ಪಾಲ್ಗೊಳ್ಳುವಿಕೆಯಿಂದ ಸ್ವಾಯತ್ತ ಸಂಸ್ಥೆಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು ಸಾಧ್ಯ ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ.ನಾಗರಾಜ್ ನುಡಿದರು.
ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ನಿಟ್ಟೆ ವಿದ್ಯಾ ವಿವಿಧೋದ್ದೇಶ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ವಿವಿಧೋದ್ದೇಶ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರರ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನರಿಂದಲೇ ಪ್ರಾರಂಭವಾಗುವ, ಜನರಿಂದಲೇ ವಹಿವಾಟು ನಡೆಸುವ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಒಂದು ಅಪರೂಪ ಆಂದೋಲನ. ಇದು ಕೇವಲ ಸಹಕಾರ ಸಂಘಗಳ ಸದಸ್ಯರ ಏಳಿಗೆಗಷ್ಟೇ ಮೀಸಲಾಗಬಾರದು, ಅದು ಸುತ್ತಣ ಪರಿಸರದ ಸಮಸ್ಯೆಗಳಿಗೆ ಕೂಡ ಸೂಕ್ತ ಪರಿಹಾರ ಕಲ್ಪಿಸುವ ಅಂತಃಕರಣವನ್ನೂ ರೂಢಿಸಿಕೊಳ್ಳಬೇಕು ಎಂದರು.
ಈ ನಿಟ್ಟಿನಲ್ಲಿ ಯಲಹಂಕದ ’ನಿಟ್ಟೆ ವಿದ್ಯಾ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ’, ನಿಜಕ್ಕೂ ಮಾದರಿಯಾಗಿದೆ. ಹಾರೋಹಳ್ಳಿಯಲ್ಲಿ ಅದು ಸ್ಥಾಪಿಸಿರುವ ಜನೌಷಧಿ ಕೇಂದ್ರ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಹಕಾರ ಆಂದೋಲನಕ್ಕೆ ಶುಭ ನಾಂದಿ ಹಾಡಿದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಮುಖಂಡ ಸಿದ್ದನಗೌಡ ಸಣ್ಣರಾಮನ ಗೌಡ ಪಾಟೀಲರನ್ನು ನೆನಪು ಮಾಡಿಕೊಳ್ಳಲೇಬೇಕು ಎಂದರು.
ತರಬೇತಿ ಕಾಠ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಕಾರ್ಯದರ್ಶಿ ಲಕ್ಷ್ಮೀಪತಯ್ಯ, ರಕ್ತದಾನದಲ್ಲಿ ಗಿನ್ನಿಸ್ ದಾಖಲೆಯ ಮಧುರಾ ಆಶೋಕ್ ಕುಮಾರ್ ಹಾಗೂ ಕೌಶಲ್ಯ ತರಬೇತುದಾರ ಸ್ಟಾರ್ ವೆಂಕಟೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಬೆಂಗಳೂರು ನಗರ ಜಿಲ್ಲಾ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಂಲಕ್ಷ್ಮಿ, ವ್ಯವಸ್ಥಾಪಕ ಆರ್.ನಾಗರಾಜ್, ನಿಟ್ಟೆ ವಿದ್ಯಾ ವಿವಿಧೋದ್ದೇಶ ಸಹಕಾರ ಸಂಘದ ಪ್ರಮುಖ ಪದಾಧಿಕಾರಿಗಳಾದ ರಾಜ ಶೆಟ್ಟಿ, ಜಯಕೃಷ್ಣ ಹಾಗೂ ಆಯೇಷಾ ಸಿದ್ದಿಕಿ ಉಪಸ್ಥಿತರಿದ್ದರು.