

ಬೆಂಗಳೂರು: ಹಳೇ ಕೇಸ್ ಗಳ ವಿಲೇವಾರಿ ನೆಪವೊಡ್ಡಿ, 31 ವರ್ಷಗಳ ಹಳೆಯ ಕೇಸ್ ಗೆ ಮರು ಜೀವ ನೀಡಿ ಹಿಂದು ಕಾರ್ಯಕರ್ತನನ್ನು ಬಂಧಿಸಿದ್ದು, ಕಾಂಗ್ರೆಸ್ ಸರ್ಕಾರದ ದ್ವೇಷದ ರಾಜಕಾರಣವೆಂದು ಆರೋಪಿಸಿರುವ ಕೇಸರಿ ಪಡೆ ಕೆರಳಿ ಕೆಂಡವಾಗಿದೆ. ಅಲ್ಲದೆ ಸರ್ಕಾರಕ್ಕೆ ಸೆಡ್ಡು ಹೊಡೆದು ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬುಧವಾರ ಹೋರಾಟಕ್ಕೆ ಧುಮುಕಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರಿಗೆ ಮಂಗಳವಾರ ಈ ವಿಷಯ ತಿಳಿಸಿದರು. ರಾಮ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ 1992ರಲ್ಲಿ ಸಂಭವಿಸಿದ ಘಟನೆ, ದಾಖಲಾದ ಪ್ರಕರಣ ಮರು ಕೆದಕಲಾಗಿದೆ. ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ, ಕೂಡಲೇ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.
ನೆಲದ ಕಾನೂನಿಗೆ ಗೌರವ ನೀಡುವುದು ನಮಗೂ ಗೊತ್ತಿದೆ. ತಪ್ಪು ಮಾಡಿದವರು ಎಂದು ಸರ್ಕಾರ ಹೇಗೆ ತೀರ್ಮಾನಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಪೊಲೀಸರ ನಡವಳಿಕೆಯನ್ನು ಹಿಂದು ಕಾರ್ಯಕರ್ತರು ಗಮನಿಸುತ್ತಿದ್ದು, ರಾಜ್ಯದ ಜನರು ವಿರೋಧಿಸುತ್ತಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ, ಕಾನೂನು ಪ್ರಕಾರ ಕ್ರಮದ ಬಗ್ಗೆ ಸಿಎಂ, ಗೃಹ ಸಚಿವರಿಗೆ ಅಪಾರ ಕಾಳಜಿಯಿದೆ. ಆದರೆ ಈಗಿನ ಸಂದರ್ಭ, ಸನ್ನಿವೇಶ ಹೇಗಿದೆ ? ಇದೇ ಸಂದರ್ಭದಲ್ಲಿ ಹಿಂದು ಕಾರ್ಯಕರ್ತನನ್ನು ಬಂಧಿಸಿದ್ದರ ಔಚಿತ್ಯವೇನು ? ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವುದು ಸರ್ಕಾರಕ್ಕೆ ಬೇಡವಾಗಿದೆಯೆ ? ಎಂದು ವಿಜಯೇಂದ್ರ ಪ್ರಶ್ನೆಗಳ ಸುರಿಮಳೆಗರದರು.
ಶತಮಾನಗಳ ಕನಸು ನನಸಾಗುವ ಸಂಭ್ರಮವು ಕರ್ನಾಟಕ ಸೇರಿ ಇಡೀ ದೇಶದಲ್ಲಿ ಮನೆ ಮಾಡಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಮೈಸೂರಿನ ಖ್ಯಾತಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠೆಗೆ ಆಯ್ಕೆಯಾಗಿರುವುದು ರಾಜ್ಯದಲ್ಲಿ ಹೆಮ್ಮೆ, ಸಂತಸ ಇಮ್ಮಡಿಸುವಂತೆ ಮಾಡಿದೆ.
ಇಂತಹ ವಾತಾವರಣದಲ್ಲಿ ಹಿಂದುಗಳ ಭಕ್ತಿ, ಭಾವನೆಗೆ ಧಕ್ಕೆ ತರುವ, ರಾಮಭಕ್ತನನ್ನು ಬಂಧಿಸಿ ಭೀತಿ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ಹಿಂದುಗಳ ವಿರೋಧಿ, ಬರಗಾಲದಲ್ಲೂ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಕಾಂಗ್ರೆಸ್ ಸರ್ಕಾರದ ನಡವಳಿಕೆಯು ಹಿಂದುಗಳ ವಿರುದ್ಧದ ದ್ವೇಷ ಅಸೂಯೆ ಹೊರಹಾಕಿದ್ದು, ಕರ್ನಾಟಕ ಮಾತ್ರವಲ್ಲ, ಇಡೀ ದೇಶಕ್ಕೆ ಗೊತ್ತಾಗಿದೆ. ಮುಂದಿನ ಬೆಳವಣಿಗೆಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.