ಇಸ್ರೇಲ್​ ಆವಿಷ್ಕಾರಗಳಿಂದ ಪ್ರಪಂಚ ಕಲಿಯುವುದಿದೆ ಬಹಳ: ಟೆಲ್​ ಅವಿವ್​ನಲ್ಲಿ ಸದ್ಗುರು ಅಭಿಪ್ರಾಯ

Sadhguru 2
Published on

ಇಸ್ರೇಲ್​: ಮಣ್ಣು ರಕ್ಷಿಸಿ ಅಭಿಯಾನ ನಡೆಸುತ್ತಿರುವ ಈಶ ಫೌಂಡೇಷನ್​ನ ಸದ್ಗುರು ಸದ್ಯ ಇಸ್ರೇಲ್​ ತಲುಪಿದ್ದು, ಅಲ್ಲಿಯೂ ಮಣ್ಣು ರಕ್ಷಣೆಯ ಸಲುವಾಗಿ ತಮ್ಮ ಯೋಚನೆಗಳನ್ನು ಮಂಡಿಸಿದ್ದಾರೆ. ಮಣ್ಣು ರಕ್ಷಣೆಯ ನಿಟ್ಟಿನಲ್ಲಿ ತಾವು ಏಕಾಂಗಿಯಾಗಿ ಬೈಕ್​ನಲ್ಲಿ ವಿಶ್ವ ಪರ್ಯಟನೆ ಮಾಡಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡಿರುವ ಅವರು ತನ್ನಿಮಿತ್ತ ಇಸ್ರೇಲ್‌ಗೆ ಭೇಟಿ ನೀಡಿದಾಗ, ಇಸ್ರೇಲ್‌ನ ಕೃಷಿ ಪದ್ಧತಿಗಳು ಮತ್ತು ಆವಿಷ್ಕಾರಗಳಿಂದ ಪ್ರಪಂಚ ಕಲಿಯಲು ಮತ್ತು ಗಳಿಸಲು ಬಹಳಷ್ಟಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರಪಂಚದ ಉಳಿದ ಭಾಗಗಳ ಫಲವತ್ತಾದ ಭೂಮಿಯ ಅವನತಿಯನ್ನು ಕಂಡಾಗ, ಇಸ್ರೇಲ್ ಮರುಭೂಮಿಯನ್ನು ಫಲವತ್ತಾದ, ಕೃಷಿ ಕ್ಷೇತ್ರಗಳಾಗಿ ಪರಿವರ್ತಿಸುವಲ್ಲಿ ನಿರತವಾಗಿದೆ. ಇಸ್ರೇಲ್​ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ತನ್ನ ಜಿಡಿಪಿಯ 4.3 ಪ್ರತಿಶತವನ್ನು ಹೂಡಿಕೆ ಮಾಡಿದೆ. ಕೃಷಿ ಉದ್ಯಮ, ರೈತರು, ತಾಂತ್ರಿಕ ಸಂಶೋಧನೆ ಮತ್ತು ಸರ್ಕಾರದ ನಡುವಿನ ಸಹಕಾರವು ಒಂದು ವಿದ್ಯಮಾನಕ್ಕೆ ಕಾರಣವಾಗಿದೆ. ಇಸ್ರೇಲ್​ ಕೃಷಿಯ ಹಲವು ಅಂಶಗಳನ್ನು ಅತ್ಯಂತ ನಿಖರವಾದ ಕಾರ್ಯವಾಗಿ ಅಭಿವೃದ್ಧಿಪಡಿಸಿ ಪ್ರಪಂಚಕ್ಕೆ ಮಾರ್ಗದರ್ಶನ ನೀಡಿದೆ ಎಂದು ಸದ್ಗುರು ಅಭಿಪ್ರಾಯಪಟ್ಟರು.

ಬದ್ಧತೆ ಮತ್ತು ದೃಷ್ಟಿಗೆ ಇಸ್ರೇಲ್​ ಅತ್ಯುತ್ತಮ ಉದಾಹರಣೆ. ಪ್ರಪಂಚದ ಉಳಿದ ಭಾಗಗಳಲ್ಲಿ ಫಲವತ್ತಾದ ಮಣ್ಣು ಮರಳಾಗಿ ಮಾರ್ಪಾಡಾಗುತ್ತಿರುವಾಗ, ಇಸ್ರೇಲ್​ ಮರಳನ್ನು ಫಲವತ್ತಾದ ಮಣ್ಣಾಗಿ ಪರಿವರ್ತಿಸುತ್ತಿದೆ. ಶೇ.99 ತನ್ನದೇ ಆದ ಆಹಾರ ಉತ್ಪಾದಿಸುತ್ತಿದೆ ಮತ್ತು ಕೃಷಿ ತಂತ್ರಜ್ಞಾನದಲ್ಲಿ ಪ್ರಮುಖ ಆವಿಷ್ಕಾರವನ್ನು ಹೊಂದಿದೆ ಎಂದ ಸದ್ಗರು, ಇಸ್ರೇಲ್ ಪ್ರಪಂಚಕ್ಕೆ ಸ್ಫೂರ್ತಿ ನೀಡಲಿ ಎಂದು ಆಶಿಸಿದರು.

ಮಣ್ಣು ರಕ್ಷಣೆ ಅಭಿಯಾನದ ನಿಟ್ಟಿನಲ್ಲಿ ಮಾರ್ಚ್ 21ರಂದು ಲಂಡನ್‌ನಿಂದ 100 ದಿನಗಳ ಏಕಾಂಗಿ ಮೋಟಾರ್‌ ಸೈಕಲ್ ಪ್ರಯಾಣ ಪ್ರಾರಂಭಿಸಿದ ಸದ್ಗುರು, ಯುರೋಪ್‌ನ ಗಮನಾರ್ಹ ಭಾಗಗಳು ಮತ್ತು ಮಧ್ಯ ಏಷ್ಯಾದ ಕೆಲವು ಭಾಗಗಳಲ್ಲಿ ಪ್ರಯಾಣಿಸಿದ್ದಾರೆ. ಮಣ್ಣಿನ ಅವನತಿ ತಡೆಯಲು ತುರ್ತು ಕಾರ್ಯನೀತಿ ನಿರೂಪಣೆಗೆ ಸಾರ್ವಜನಿಕರ ಮತ್ತು ಸರ್ಕಾರಗಳ ಬೆಂಬಲವನ್ನು ಹೆಚ್ಚಿಸಿದ್ದಾರೆ. ಕಠೋರ ಮರುಭೂಮಿಯನ್ನು ಫಲವತ್ತಾದ ಭೂಮಿಯಾಗಿ ಪರಿವರ್ತಿಸಿದ ಇಸ್ರೇಲ್‌ನ ದೃಢನಿಶ್ಚಯದ ಜನರನ್ನು ಉಲ್ಲೇಖಿಸುತ್ತ, ಜನರು ಅಗತ್ಯವಾದ ಸಂಕಲ್ಪವನ್ನು ಹೊಂದಿರುವಾಗ, ನಾವು ವಿಪತ್ತುಗಳನ್ನು ತಿರುಗಿಸಿ ಸಕಾರ್ಯಗಳನ್ನಾಗಿಸಬಹುದು ಮತ್ತು ಖಂಡಿತವಾಗಿಯೂ ಪ್ರಪಂಚದಲ್ಲಿ ಮಣ್ಣಿನ ಅವನತಿಗೆ ಸಂಬಂಧಿಸಿದಂತೆ ನಾವು ಇದೀಗ ಎಲ್ಲಿದ್ದೇವೆಯೋ, ಅಲ್ಲಿಂದ ನಾವು ಮಣ್ಣನ್ನು ಉಳಿಸಲು ಅಗತ್ಯವಾದ ಸಂಕಲ್ಪ ಮತ್ತು ನಿಶ್ಚಯವನ್ನು ಹೊಂದಿದ್ದರೆ ಇದನ್ನು ಹಿಂದಿರುಗಿಸಬಹುದು. ಇದನ್ನು ಸಾಧ್ಯವಾಗಿಸೋಣ ಎಂದು ಹೇಳಿದರು.

ಚಾರ್ಲ್ಸ್ ಬ್ರಾನ್ಫ್‌ಮನ್ ಸಭಾಂಗಣದಲ್ಲಿ 4,500 ಜನರ ಬೃಹತ್ ಗುಂಪನ್ನು ಸೆಳೆಯುವ ಮೂಲಕ ಸದ್ಗುರು ಮಣ್ಣು ಉಳಿಸಿ ಅಭಿಯಾನದ 48ನೇ ದಿನದಂದು ಇಸ್ರೇಲ್‌ನ ಟೆಲ್ ಅವಿವ್​ಗೆ ಆಗಮಿಸಿದರು. ಕಾರ್ಯಕ್ರಮದಲ್ಲಿ ಇಸ್ರೇಲ್‌ನ ಆರ್ಥಿಕತೆ ಮತ್ತು ಕೈಗಾರಿಕಾ ಸಚಿವಾಲಯದ ಮಹಾನಿರ್ದೇಶಕ ಡಾ. ರಾನ್ ಮಲ್ಕಾ ಮತ್ತು ಇಸ್ರೇಲ್‌ನ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ರಾಜೀವ್ ಬೋಡ್ವಾಡೆ ಅವರು ಪರಿಣಾಮಕಾರಿ ಮಾತುಗಳನ್ನಾಡಿದರು.

ಇಸ್ರೇಲ್‌ನ ಪರಿಸರ ಸಂರಕ್ಷಣೆಯ ಸಚಿವೆ ತಮರ್ ಝಾಂಡ್‌ಬರ್ಗ್, ಈ ಅಭಿಯಾನವನ್ನು ಆರಂಭಿಸಿದ್ದಕ್ಕಾಗಿ ಸದ್ಗುರುಗೆ ತಮ್ಮ ಕೃತಜ್ಞತೆ ಮತ್ತು ಬೆಂಬಲವನ್ನು ಮನಃಪೂರ್ವಕವಾಗಿ ವ್ಯಕ್ತಪಡಿಸಿದರು. ಆರೋಗ್ಯಕರ ಮಣ್ಣು ಮತ್ತು ಸುಸ್ಥಿರ ಭೂಮಿ ಮತ್ತು ಸುಸ್ಥಿರ ಮಣ್ಣಿನ ನಿರ್ವಹಣೆ ಇಲ್ಲದೆ ನಾವು ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಿಲ್ಲ, ನಾವು ಸಾಕಷ್ಟು ಆಹಾರವನ್ನು ಉತ್ಪಾದಿಸಲು ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ. ನಾನು ಸದ್ಗುರುಗೆ ವೈಯಕ್ತಿಕವಾಗಿ ಮತ್ತು ಈ ಬೃಹತ್ ಗುಂಪಿನ ಪರವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಈ ಜನರನ್ನು ಒಟ್ಟಾಗಿಸಿ, ನಮ್ಮೆಲ್ಲರನ್ನೂ ಒಗ್ಗೂಡಿಸಿದ್ದಕ್ಕಾಗಿ ಮತ್ತು ಜೀವನದ ವೃತ್ತವು ಮಣ್ಣಿನ ಸುಸ್ಥಿರತೆಯ ಮೇಲೆ ಅವಲಂಬಿತವಾಗಿದೆ ಎಂದು ನಮಗೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net