ಲೋಕಸಭಾ ಚುನಾವಣೆ ಬಳಿಕ ಹೊಸ ಸರ್ಕಾರ ಮೊದಲು ಮಾಡಬೇಕಾದ ಕೆಲಸ ಏನೆಂದು ತಿಳಿಸಿದ ಸದ್ಗುರು!

Sadhguru
Published on

ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇವೆ. ಕೆಲವೇ ವಾರಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ನಾಲ್ಕೈದು ತಿಂಗಳಲ್ಲಿ ಹೊಸ ಸರ್ಕಾರವೂ ರಚನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಈಶ ಫೌಂಡೇಶನ್​ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್​, ಹೊಸ ಸರ್ಕಾರ ಮಾಡಬೇಕಾದ ಬಹು ಮುಖ್ಯ ಕೆಲಸ ಏನೆಂಬುದನ್ನು ತಿಳಿಸಿದ್ದಾರೆ.

ಸದ್ಗುರು ಅವರು ಕೊಯಮತ್ತೂರಿನ ತಮ್ಮ ಆಶ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋವನ್ನು ಅವರದೇ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಹೊಸ ಸರ್ಕಾರ ಯಾವುದಕ್ಕೆ ಆದ್ಯತೆ ನೀಡಬೇಕೆಂಬುದನ್ನು ಸದ್ಗುರು ವಿವರಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು, ಹಿಂದು ದೇವಸ್ಥಾನಗಳ ಆಡಳಿತವನ್ನು ಹಿಂದುಗಳಿಗೆ ಹಸ್ತಾಂತರ ಮಾಡುವುದಾಗಿದೆ. ಇದು ಪರಿಹರಿಸಬೇಕಾದ ರಾಷ್ಟ್ರೀಯ ಪಿಡುಗಾಗಿದೆ ಎಂದಿದ್ದಾರೆ.

ನಾವು ನಮ್ಮನ್ನು ಜಾತ್ಯತೀತ ದೇಶ ಎಂದು ಕರೆಯುತ್ತೇವೆ ಆದರೆ, ವಾಸ್ತವವಾಗಿ ನಾವು ಆ ರೀತಿ ಇಲ್ಲ. ಏಕೆಂದರೆ, ಅತಿ ಹೆಚ್ಚು ಹಿಂದು ದೇವಾಲಯಗಳು ಸರ್ಕಾರದ ಕೈಯಲ್ಲಿವೆ ಮತ್ತು ಸರ್ಕಾರದ ಗುಮಾಸ್ತರು ನಡೆಸುತ್ತಿದ್ದು, ವ್ಯವಸ್ಥಿತವಾಗಿ ನಾಶವಾಗುತ್ತಿವೆ. ಭಕ್ತರ ಕೈಗಳಿಲ್ಲದೆ ಯಾವುದೇ ದೇವಾಲಯಕ್ಕೂ ಪಾವಿತ್ರ್ಯತೆ ಎಂಬುದು ಇರುವುದಿಲ್ಲ. ಹಿಂದು ದೇವಾಲಯಗಳ ಆಡಳಿತವನ್ನು ಹಿಂದುಗಳಿಗೆ ಹಸ್ತಾಂತರಿಸುವುದು ಹೊಸ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಇದು ಪರಿಹರಿಸಬೇಕಾದ ರಾಷ್ಟ್ರೀಯ ಪಿಡುಗಾಗಿದೆ ಎಂದು ಸದ್ಗುರು ಹೇಳಿದ್ದಾರೆ.

#FreeHinduTemples ಮತ್ತು #GeneralElections2024 ಹ್ಯಾಸ್​ಟ್ಯಾಗ್​ ಅಡಿಯಲ್ಲಿ ಚುನಾವಣೆಗೂ ಮುನ್ನ ಹೊಸ ಅಭಿಯಾನವನ್ನು ಸದ್ಗುರು ಆರಂಭಿಸಿದ್ದಾರೆ.

ಸರ್ಕಾರದ ಅಧೀನದಲ್ಲಿರುವ ದೇವಾಲಯಗಳ ಆದಾಯದ ಸಂಗ್ರಹವನ್ನು ಕೋರುವ ವಿವಾದಾತ್ಮಕ 'ದೇವಾಲಯ ಮಸೂದೆ'ಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಪಾಸ್​ ಮಾಡಲು ಪ್ರಯತ್ನಿಸಿ, ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ಬೆನ್ನಲ್ಲೇ ವಿಧಾನ ಪರಿಷತ್ತಿನಲ್ಲಿ ಸೋಲು ಕಂಡು ಕೆಲವೇ ದಿನಗಳಲ್ಲಿ ಸದ್ಗುರು ಅವರ ಈ ಹೇಳಿಕೆಗಳು ಬಂದಿವೆ. ಇತ್ತೀಚೆಗಷ್ಟೇ ಬಿಜೆಪಿ ಕೂಡ ಇದೇ ವಿಚಾರವಾಗಿ ಧ್ವನಿ ಎತ್ತಿತ್ತು.

ಹಿಂದು ದೇವಾಲಯಗಳ ಆಡಳಿತವನ್ನು ಹಿಂದುಗಳೇ ನಡೆಸಬೇಕೆಂಬುದು ಸದ್ಗುರು ಅವರ ಬಯಕೆಯಾಗಿದ್ದು, ಇದನ್ನು ಹೊಸ ಸರ್ಕಾರ ಯಾವ ರೀತಿಯಲ್ಲಿ ಪರಿಗಣಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net