

ನವದೆಹಲಿ: ಮೊದಲಿನಿಂದಲೂ ಮೂರು ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ, ಪ್ರತಿಭಟಿಸುತ್ತಿರುವ ಬಿಜೆಪಿಯ ಬಹುಕಾಲದ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ(ಎಸ್ಎಡಿ) ಇಂದು ಮೈತ್ರಿಕೂಟದಿಂದ ಹೊರಬಿದ್ದಿದೆ.
ಮೂರು ಕೃಷಿ ಮಸೂದೆಗಳು ಅಂಗೀಕಾರಗೊಂಡಿದ್ದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಇವು ರೈತ ವಿರೋಧಿಯಾಗಿದ್ದು ಅಂಕಿತ ಹಾಕದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಮನವಿ ಮಾಡಿದ್ದೇವೆ. ಎನ್ಡಿಎ ಮೈತ್ರಿಕೂಟ ತೊರೆಯಲು ನಮ್ಮ ಪಕ್ಷದ ಕೋರ್ ಕಮಿಟಿಯ ಎಲ್ಲ ನಾಯಕರೂ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ ಎಂದು ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ನಾವು ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಅಷ್ಟೇ ಮೈತ್ರಿ ಕಳಚಿಕೊಂಡಿದ್ದೇವೆ..ಆದರೆ ಉಳಿದ ವಿಚಾರಗಳಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಬೆಂಬಲ ಇದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಮಸೂದೆಗಳನ್ನು ವಿರೋಧಿಸಿ ಸುಖ್ಬೀರ್ ಅವರ ಪತ್ನಿ ಹರ್ಸಿಮ್ರತ್ ಕೌರ್ ತಮ್ಮ ಕೇಂದ್ರ ಸಚಿವೆ ಸ್ಥಾನಕ್ಕೆ ಕಳೆದ ಸೆ.17ರಂದು ರಾಜೀನಾಮೆ ನೀಡಿದ್ದರು. ಬಿಜೆಪಿಯ ಜತೆ 22 ವರ್ಷಗಳ ಕಾಲದ ನಂಟು ಹೊಂದಿರುವ ಅಕಾಲಿ ದಳ ಪಂಜಾಬ್ನಲ್ಲಿ ಹೆಚ್ಚಿನ ಸಂಖ್ಯೆಯ ರೈತ ಮತದಾರರನ್ನು ಹೊಂದಿದೆ. (ಏಜೆನ್ಸೀಸ್)