ಮೇಕೆಯ ಕುತ್ತಿಗೆ ಕಚ್ಚಿ ಬಲಿ ನೀಡುವ ಆಚರಣೆ: ಆರೋಪಿ ವಿರುದ್ಧ ಪ್ರಕರಣ ದಾಖಲು | Sacrificing Goat

Sacrificing Goat
Published on

Sacrificing Goat: ವ್ಯಕ್ತಿಯೊಬ್ಬ ಮೇಕೆಯ ಕುತ್ತಿಗೆ ಕಚ್ಚಿ ಬಲಿ ನೀಡುತ್ತಿರುವ ವಿಡಿಯೋ ವೈರಲ್​​ ಆಗಿ ಆತನ ವಿರುದ್ಧ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಶನಿವಾರ (ಮೇ.24) ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ.

ಈ ಕೃತ್ಯವನ್ನು ಅಮಾನವೀಯ ಮತ್ತು ಕಾನೂನುಬಾಹಿರ ಎಂದು ಖಂಡಿಸಲಾಗಿದೆ. ಮೇಕೆ ಅಥವಾ ಕುರಿಯ ಕುತ್ತಿಗೆಗೆ ಕಚ್ಚಿ ಬಲಿ ನೀಡುವುದನ್ನು ಸ್ಥಳೀಯವಾಗಿ 'ಗಾಗು ಪಟ್ಟದಂ' ಎಂದು ಕರೆಯಲಾಗುತ್ತದೆ ಮತ್ತು ಕೆಲವು ಹಳ್ಳಿಗಳಲ್ಲಿ ಗ್ರಾಮ ದೇವರುಗಳು ಮತ್ತು ದೇವತೆಗಳನ್ನು ಒಲಿಸಿಕೊಳ್ಳಲು ಇದನ್ನು ಆಚರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಮೇಕೆಯನ್ನು ಬಲಿ ನೀಡುವ ವ್ಯಕ್ತಿ, ತಾನು ದೆವ್ವ ಹಿಡಿದಂತೆ ವರ್ತಿಸುತ್ತಾನೆ ಮತ್ತು ಬಲಿ ಪ್ರಾಣಿಯ ಗಂಟಲನ್ನು ಅದು ಕೊನೆಯುಸಿರೆಳೆಯುವವರೆಗೂ ಕಚ್ಚುತ್ತಾನೆ. ಈ ಭೀಕರ ಆಚರಣೆ ಮೇ 21 ರಂದು ಬೊಮ್ಮಕಲ್‌ನ ರೇಣುಕಾ ಎಲ್ಲಮ್ಮ ತಲ್ಲಿ ದೇವಸ್ಥಾನದಲ್ಲಿ ನಡೆದಿದ್ದು, ಸ್ಥಳೀಯ ಸಂಪ್ರದಾಯದ ಭಾಗವಾಗಿದೆ ಎಂದು ವರದಿಯಾಗಿದೆ.

pradeep_famous ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಾಣಿಸಿಕೊಂಡ ಆಘಾತಕಾರಿ ದೃಶ್ಯಗಳಲ್ಲಿ, ಆ ವ್ಯಕ್ತಿ ತನ್ನ ಹಲ್ಲುಗಳನ್ನು ಮಾತ್ರ ಬಳಸಿ ಪ್ರಾಣಿಯನ್ನು ಕೊಲ್ಲುತ್ತಿರುವುದು ಕಂಡುಬರುತ್ತದೆ.

ಈ ವಿಡಿಯೋ ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅದುಲಪುರಂ ಗೌತಮ್ ದೂರು ದಾಖಲಿಸಿದ್ದಾರೆ. ದೂರಿಗೆ ಪ್ರತಿಕ್ರಿಯಿಸಿದ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ವಿಡಿಯೋದಲ್ಲಿ ಕಾಣುವ ವ್ಯಕ್ತಿಯ ಗುರುತು ಮತ್ತು ಇತರರು ಆಚರಣೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net