

ಮನುಷ್ಯನ ಆಲೋಚನೆಗಳು ಉದಾತ್ತವಾಗಿರಬೇಕು. ಜೀವನದಲ್ಲಿ ಪ್ರೀತಿ ಮತ್ತು ನಂಬಿಕೆ ಅತ್ಯಮೂಲ್ಯ. ಏಕೆಂದರೆ ಪ್ರೀತಿ ಎಲ್ಲರ ಮೇಲೂ ಹುಟ್ಟುವುದಿಲ್ಲ. ನಂಬಿಕೆ ಎಲ್ಲರಲ್ಲೂ ಉಳಿಯುವುದಿಲ್ಲ. ಸಾಧಿಸುವ ಉತ್ಕಟ ಬಯಕೆಯಿದ್ದರೆ ಸಾಕು. ಆ ಹಾದಿಯಲ್ಲಿ ಬರುವ ಮುಳ್ಳುಗಳು ಕೂಡ ಹೂವಾಗುತ್ತವೆ. ಪ್ರಾಮಾಣಿಕ ಸಂಬಂಧಗಳಿಗೆ ನೀರಿನಂತೆ ಬಣ್ಣ ಆಕಾರ ರುಚಿ ಇರುವುದಿಲ್ಲ. ಆದರೂ ಜೀವನಕ್ಕೆ ಇವು ಬಹಳ ಮುಖ್ಯ. ಅಸಾಮಾನ್ಯ ಸಾಧನೆಯ ಹಿಂದೆ ಅತ್ಯಮೂಲ್ಯ ತ್ಯಾಗವಿರುತ್ತದೆ. ಜೀವನದಲ್ಲಿ ಯಾವ ಮನುಷ್ಯನೂ ಪರಿಪೂರ್ಣನಲ್ಲ. ಬರುವ ಟೀಕೆಗಳು ಸಹಜ ಮತ್ತು ನಿರೀಕ್ಷಿತ. ಹಾಗಾಗಿ ಕುಗ್ಗದೇ ಗುರಿಯತ್ತ ಹೆಜ್ಜೆ ಇಡಬೇಕಾಗುತ್ತದೆ. ಎಲ್ಲರನ್ನು ಪ್ರೀತಿಸು. ಕೆಲವರನ್ನಷ್ಟೇ ನಂಬು. ಯಾರಿಗೂ ಕೇಡು ಬಗೆಯಬೇಡ. ಇದುವೇ ಜೀವನದ ನಿಜ ಸೂತ್ರ.
ಮನುಷ್ಯ ಎತ್ತರಕ್ಕೆ ಬೆಳೆಯಬೇಕೇನೋ ನಿಜ. ಆದರೆ ಅದಕ್ಕಾಗಿ ಮೆಟ್ಟಿಲನ್ನು ತುಳಿಯಬೇಕೇ ಹೊರತು ಮತ್ತೊಬ್ಬರನ್ನಲ್ಲ. ಬರುವಾಗ ಮತ್ತು ಹೋಗುವಾಗ ಬರಿಗೈ. ತೆರಳುವ ಮುನ್ನ ಕೆಲವರ ಹೃದಯ ಮನಸ್ಸುಗಳಲ್ಲಿ ಸ್ಥಾನ ಗಳಿಸುವತ್ತ ಗಮನವಿರಬೇಕು. ಬೇರೆ ಬೇರೆ ಧರ್ಮಗಳನ್ನು ಒಳ ಹೊಕ್ಕು ನೋಡಿದರೆ ಎಲ್ಲಾ ಧರ್ಮಗಳ ತಿರುಳು ಒಳ್ಳೆಯದನ್ನು ಬಯಸುವುದೇ ಆಗಿದೆ. ಸಹನೆ ಶಾಂತಿ ಸಮಾಧಾನವಿಲ್ಲದ ಮನುಷ್ಯ ಜೀವನದಲ್ಲಿ ಏನನ್ನೂ ಸಾಧಿಸಲಾರ. ಅತಿ ಕಡಿಮೆ ಬಯಕೆಗಳು ಇರುವವನು ದೇವರಿಗೆ ಅತ್ಯಂತ ಸಮೀಪ ಇರುತ್ತಾನೆ. ನಿರೀಕ್ಷೆ ಇಟ್ಟುಕೊಳ್ಳುವುದು, ವಿಶ್ವಾಸ ಇಡುವುದು ತಪ್ಪಲ್ಲ. ಆದರೆ ಯಾರಲ್ಲಿ ಎಂಬುದು ಮುಖ್ಯವಾದುದು.
ಕತ್ತಲು ಎಷ್ಟೇ ದಟ್ಟವಾಗಿರಬಹುದು. ಆದರೆ ಸೂರ್ಯೋದಯ ಆಗುವುದನ್ನು ಅದು ತಡೆಯಲಾಗದು. ಸೋಲು ಕಲಿಸುವ ಪಾಠ ದೊಡ್ಡದು. ಗೆಲುವು ಅನೇಕ ಸಂಗತಿಗಳ ಮುಕ್ತಾಯವೂ ಆಗಬಹುದು. ಕತ್ತಲನ್ನು ಶಪಿಸುತ್ತಾ ಕೂಡುವುದಕ್ಕಿಂತಲೂ ಒಂದು ಸಣ್ಣ ದೀಪ ಬೆಳಗಿಸುವುದು ಲೇಸು. ಮೂರ್ಖರ ಜೊತೆ ವಾದಿಸಿ ವಿವಾದಕ್ಕೆ ಕಾರಣವಾಗುವ ಬದಲು ವಿವೇಕದಿಂದ ಹಿಂದೆ ಸರಿಯುವುದೇ ಒಳ್ಳೆಯದು. ಅಧರ್ಮದಿಂದ ಮನುಷ್ಯ ತಾತ್ಕಾಲಿಕವಾಗಿ ಮೇಲೇರಿದರೂ ಅಂತಿಮವಾಗಿ ಬುಡಸಹಿತ ನಾಶವಾಗುತ್ತಾನೆ.