ಯೋಧ ಸಚಿನ್​ ಸಾವಂತ್​​ರನ್ನು ಬಂಧಿಸಿ ಕೈಗೆ ಕೋಳ ಹಾಕಿ ನೆಲದ ಮೇಲೆ ಕೂರಿಸಿದ ಪೊಲೀಸರು; ದೇಶ ಕಾಯುವ ಸೈನಿಕನನ್ನು ಹೀಗೆ ನಡೆಸಿಕೊಳ್ಳೋದು ಸರೀನಾ?

CRPF
Published on

ಬೆಳಗಾವಿ: ಸಿಆರ್​ಪಿಎಫ್​ ಕೋಬ್ರಾ ಕಮಾಂಡೋ ಸಚಿನ್​ ಸಾವಂತ್​ ಅವರ ಮೇಲೆ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ ವಿಡಿಯೋ ಮತ್ತು ಕೈಗೆ ಕೋಳ ಹಾಕಿ ಸ್ಟೇಶನ್​​ನಲ್ಲಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಹಾಗೇ ಪೊಲೀಸರ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜಕೀಯ ಮುಖಂಡರು ಸೇರಿ, ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಚಿನ್​ ಸಾವಂತ್​ ಅವರು ಮಾಸ್ಕ್​ ಹಾಕದೆ ತಮ್ಮ ವಾಹನ ತೊಳೆಯುತ್ತಿದ್ದರು. ಆದರೆ ಪೊಲೀಸರು ಮಾಸ್ಕ್ ಹಾಕಿಲ್ಲ ಎಂಬುದನ್ನೇ ದೊಡ್ಡ ವಿಷಯನ್ನವಾಗಿ ಮಾಡಿ, ಸಾರ್ವಜನಿಕ ಸ್ಥಳದಲ್ಲಿಯೇ ಹೊಡೆದಿದ್ದಾರೆ. ಕಳ್ಳರ ಕೈಗೆ ಬೇಡಿ ತೊಡಿಸುವಂತೆ ಯೋಧ ಸಚಿನ್​ ಕೈಯಿಗೂ ಕೋಳ ಹಾಕಿ ಸ್ಟೇಶನ್​​ನಲ್ಲಿ ಕೂಡಿ ಹಾಕಿದ್ದರು.

ಅವರು ಸಿಆರ್​ಪಿಎಫ್​ ಯೋಧ ಎಂದು ಗೊತ್ತಾದ ಮೇಲೆ ಕೂಡ ಪೊಲೀಸರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಯತ್ನ ಮಾಡಲಿಲ್ಲ. ಈ ಘಟನೆಗೆ ಕಾರಣರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರೂ ಕೂಡ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಏಪ್ರಿಲ್​ 23ರಂದು ವೈರಲ್ ಆಗಿತ್ತು.

ಅಂದು ಸಚಿನ್​ ಅವರೇ ಮೊದಲು ಪೊಲೀಸ್ ಪೇದೆಗಳ ಬಟ್ಟೆ ಹಿಡಿದು ಎಳೆದಾಡಿದರು. ಹಾಗಾಗಿ ಕೋಪಗೊಂಡ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಟ್ವಿಸ್ಟ್​ ಸಿಕ್ಕಿದ್ದು, ಪೊಲೀಸರು ವೃಥಾ ಯೋಧನ ಮೇಲೆ ಲಾಠಿ ಎತ್ತಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net