ರಾಜಸ್ಥಾನ ಡಿಸಿಎಂ, ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಸಚಿನ್​ ಪೈಲಟ್​ಗೆ ಕೊಕ್​; ಕಾಂಗ್ರೆಸ್​ ಘೋಷಣೆ

Sachin Piolt Government
Published on

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್​ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿದೆ. ಎರಡನೇ ದಿನದ ಸಭೆಗೂ ಡಿಸಿಎಂ ಸಚಿನ್​ ಪೈಲಟ್​ ಹಾಗೂ ಆತ ಬೆಂಬಲಿಗರೂ ಹಾಜರಾಗಿಲ್ಲ. ಇದು ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.

ಜೈಪುರ್​ನ ಐಷಾರಾಮಿ ರೆಸಾರ್ಟ್​ನಲ್ಲಿ ನಡೆಯುತ್ತಿರುವ ಕಾಂಗ್ರೆಸ್​ ಶಾಸಕರ ಸಭೆಯಲ್ಲಿ 104 ಶಾಸಕರು ಹಾಜರಾಗಿದ್ದಾರೆ ಎಂದು ಹೇಳಲಾಗಿದೆ. ಬಹುಮತ ಹಾಜರುಪಡಿಸಲು 101 ಶಾಸಕರು ಸಾಕು. ಹೀಗಾಗಿ ಬಂಡಾಯವೆದ್ದಿರುವ ಸಚಿನ್​ ಪೈಲಟ್ ಹಾಗೂ ಬೆಂಬಲಿತ ಶಾಸಕರನ್ನು ಪಕ್ಷದಿಂದ ಕಿತ್ತೊಗೆಯಿರಿ ಎಂಬ ಕೂಗು ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಸಚಿನ್​ ಪೈಲಟ್​ನನ್ನು ಡಿಸಿಎಂ ಸ್ಥಾನ ಹಾಗೂ ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ ಹೇಳಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ಸಚಿನ್​ ಪೈಲಟ್​ ಜತೆ ಮಾತನಾಡಿ ಬಂಡಾಯ ಶಮನಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಿದ್ದರೂ ಸಭೆಗೆ ಪೈಲಟ್​ ಹಾಜರಾಗಿಲ್ಲ. ಇದು ಸಹಜವಾಗಿಯೇ ಉಳಿದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅವರನ್ನು ಡಿಎಸಿಂ ಸ್ಥಾನದಿಮದ ಕೆಳಗಿಳಿಸಲಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ಸಚಿನ್​ ಪೈಲಟ್​ ಹಾಗೂ 19 ಇತರ ಶಾಸಕರು ಸಭೆಯಿಂದ ದೂರವುಳಿದಿದ್ದಾರೆ ಎಮದೇ ಹೇಳಲಾಗಿತ್ತು. ಸಂಖ್ಯಾಬಲದಲ್ಲಿ ಸಿಎಂ ಅಶೋಕ್​ ಗೆಹ್ಲೋಟ್​ ಮುಂದಿದ್ದಾರೆ. ಆದರೆ, ಗೆಹ್ಲೋಟ್​ಗೆ ಬಹುಮತ ಸಾಧಿಸುವಷ್ಟು ಶಾಸಕರ ಬೆಂಬಲವಿದ್ದರೆ, ರಾಜ್ಯಪಾಲರೆದುರು ಅದನ್ನು ಸಾಬೀತು ಪಡಿಸಲಿ ಎಂದು ಸಚಿನ್​ ಬಣದ ಶಾಸಕರು ನಿನ್ನೆಯಷ್ಟೇ ಸವಾಲು ಹಾಕಿದ್ದರು.

ಕಾಂಗ್ರೆಸ್​ ತಿಕ್ಕಾಟ ಏನೇ ಇದ್ದರೂ ಅವಿಶ್ವಾಸ ನಿಣರ್ಯಕ್ಕೆ ಒತ್ತಾಯಿಸುವುದಿಲ್ಲವೆಂದು ಬಿಜೆಪಿ ಹೇಳಿದೆ. ಬಿಜೆಪಿ 72 ಶಾಸಕರನ್ನು ಹೊಂದಿದ್ದು, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ 3 ಶಾಸಕರು ಬಿಜೆಪಿಗೆ ಬೆಂಬಲಕ್ಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net