ಕೇರಳದಿಂದ ತೆಲಂಗಾಣಕ್ಕೆ ಹಾರಿದ ಸಬು ಜೇಕಬ್! 1000 ಕೋಟಿ ರೂ. ಹೂಡಿಕೆ

telangana
Published on

ಹೈದರಾಬಾದ್​ : ಕೇರಳದ ಪಿಣರಾಯಿ ವಿಜಯನ್​ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಿಟೆಕ್ಸ್​ ಗಾರ್ಮೆಂಟ್ಸ್​ ಮಾಲೀಕ ಸಬು ಜೇಕಬ್​ ಈಗ ತೆಲಂಗಾಣದತ್ತ ಮುಖ ಮಾಡಿದ್ದಾರೆ. ಹೀಗಾಗಿ ಕೇರಳದ ನಷ್ಟ, ತೆಲಂಗಾಣಕ್ಕೆ ಲಾಭವಾಗಿ ಪರಿಣಮಿಸಲಿದೆ ಎನ್ನಲಾಗಿದೆ.

ಜಗತ್ತಿನ ಎರಡನೇ ಅತಿದೊಡ್ಡ ಮಕ್ಕಳ ಉಡುಪು ಉತ್ಪಾದಕ ಕಂಪೆನಿ ಕಿಟೆಕ್ಸ್​ನ 3,500 ಕೋಟಿ ರೂ. ಯೋಜನೆಯನ್ನು ಕೇರಳದಲ್ಲಿ ಮಾಡುವುದಿಲ್ಲ ಎಂದು ಈ ಮುನ್ನ ಜಾಕಬ್​ ಘೋಷಿಸಿದ್ದರು. ತಾವು ಸ್ವತಃ ತಮ್ಮ ಮೂಲ ರಾಜ್ಯ ಕೇರಳದಿಂದ ಹೊರಹೋಗುತ್ತಿಲ್ಲ, ತಮ್ಮನ್ನು ಅಲ್ಲಿಂದ ಅಟ್ಟಲಾಗುತ್ತಿದೆ ಎಂದು ನೊಂದು ನುಡಿದಿದ್ದರು. ತದನಂತರ ತೆಲಂಗಾಣ ಮತ್ತು ಇತರ 9 ರಾಜ್ಯಗಳು ಅವರನ್ನು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ್ದವು ಎನ್ನಲಾಗಿದೆ.

ನಿನ್ನೆಯ ದಿನ ಕಿಟೆಕ್ಸ್​​ನ ಎಂಡಿ ಆದ ಸಬು ಜಾಕಬ್​ನ ತಂಡ ವಿಶೇಷ ವಿಮಾನದಲ್ಲಿ ಕೊಚಿಯಿಂದ ಹೈದರಾಬಾದ್​ಗೆ ತೆರಳಿದ್ದು, ಸಂಜೆಯ ವೇಳೆಗೆ ತೆಲಂಗಾಣದ ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್​ ಅವರು, ಕಂಪೆನಿಯು ​ರಾಜ್ಯದಲ್ಲಿ 1,000 ಕೋಟಿ ರೂ. ಆರಂಭಿಕ ಹೂಡಿಕೆ ಮಾಡುತ್ತಿರುವುದಾಗಿ ಟ್ವೀಟ್​ ಮಾಡಿದ್ದಾರೆ. ವಾರಂಗಲ್​ನ ಕೆಎಂಟಿಪಿಯಲ್ಲಿ ಕಿಟೆಕ್ಸ್​ ಕಾರ್ಖಾನೆಗಳು ಆರಂಭವಾಗಲಿವೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net