ಅಭಿಮಾನಿಗಳು ತಂದಿಟ್ಟ ಸಂಕಷ್ಟ: ಹುಟ್ಟುಹಬ್ಬದಂದೇ ಜೈಲುಪಾಲಾದ ಖ್ಯಾತ ಯೂಟ್ಯೂಬರ್​!

youtube
Published on

ನವದೆಹಲಿ: ಜನ್ಮ ದಿನ ಆಚರಿಸಲು ಹೋಗಿ ಖ್ಯಾತ ಯೂಟ್ಯೂಬರ್ ಕಂಬಿ ಎಣಿಸಬೇಕಾದ ಘಟನೆ ದೆಹಲಿಯಲ್ಲಿ ನಡೆದಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಗೌರವ್ ತನೇಜಾ ವಿರುದ್ಧ ನೋಯ್ಡಾ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ! ಯೂಟ್ಯೂಬ್​ ಮೂಲಕವೇ ಅಸಂಖ್ಯ ಅಭಿಮಾನಿಗಳನ್ನು ಪಡೆದಿರುವ ಗೌರವ್​ಗೆ ಅದೇ ಅಭಿಮಾನಿಗಳೇ ಈಗ ಜೈಲಿಗೆ ಹೋಗುವಂತೆ ಮಾಡಿದ್ದಾರೆ!

ಅಷ್ಟಕ್ಕೂ ಆಗಿದ್ದೇನೆಂದರೆ, ನಿನ್ನೆ ಜುಲೈ 9ರಂದು ಗೌರವ್​ ಅವರ ಹುಟ್ಟುಹಬ್ಬ ಇತ್ತು. ಈ ಮಾಹಿತಿಯನ್ನು ಪತ್ನಿ ರಿತು ತನೇಜಾ ಯೂಟ್ಯೂಬ್​ ಮೂಲಕ ಹಂಚಿಕೊಂಡಿದ್ದರು. ಹುಟ್ಟುಹಬ್ಬವನ್ನು ನೋಯ್ಡಾದ ಸೆಕ್ಟರ್ 51 ಮೆಟ್ರೋ ಸ್ಟೇಷನ್ ಬಳಿ ಆಚರಿಸುತ್ತಿರುವುದಾಗಿ ಅವರು ಹೇಳಿದ್ದರು. ಇದು ಅಭಿಮಾನಿಗಳಿಗೆ ತಿಳಿಯುತ್ತಲೇ ಗೌರವ್ ತನೇಜಾ ಅವರನ್ನು ನೋಡಲು ಅವರಿಗೂ ಮುನ್ನ ಮೆಟ್ರೋ ಸ್ಟೇಷನ್ ಬಳಿ ಜಮಾಯಿಸಿದ್ದರು. ಅಲ್ಲಿನ ಪರಿಸ್ಥಿತಿ ನೆರೆದಿದ್ದ ಜನರು ವಿಡಿಯೋ ಮಾಡಿ ವೈರಲ್ ಮಾಡಿದ್ದರು. ಇದರಿಂದ ತೀವ್ರ ಟ್ರಾಫಿಕ್​ ಜಾಂ ಉಂಟಾಗಿ ಸಮಸ್ಯೆಯಾಗಿದೆ. ಜನರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.

ಸಾಲದು ಎಂಬುದಕ್ಕೆ ಮುಂಬರುವ ಹಬ್ಬಗಳನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ಷ್ಮಪ್ರದೇಶವಾಗಿದ್ದ ಈ ಜಾಗದಲ್ಲಿ ಪೊಲೀಸರು ನಿಷೇಧಾಜ್ಞೆ (144 ಸೆಕ್ಷನ್​) ಹೇರಿದ್ದರು. ಇದರ ನಡುವೆಯೂ ಈ ಪರಿಯ ಗಲಾಟೆ ಉಂಟಾಗಿದ್ದರಿಂದ ಜನರು ಗೌರವ್​ ವಿರುದ್ಧ ಕೇಸ್ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ. ಕೊನೆಗೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net