

ಸರಾಯಿ ಅಕಿಲ್ (ಉತ್ತರ ಪ್ರದೇಶ) : ಉಚಿತವಾಗಿ ವಿದ್ಯುತ್ ಸಂಪರ್ಕ ಹೊಂದಿದ ವ್ಯಕ್ತಿಯೊಬ್ಬ, ತನಗೆ ಬಿಲ್ ಬಂದದ್ದನ್ನು ಕಂಡು ರೊಚ್ಚಿಗೆದ್ದು ವಿದ್ಯುತ್ ಕಂಬವನ್ನೇ ಏರಿ ಕುಳಿತ ಘಟನೆ ಉತ್ತರ ಪ್ರದೇಶದ ಸರಾಯಿ ಅಕಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದಾ ಗ್ರಾಮದಲ್ಲಿ ನಡೆದಿದೆ. ಹೈವೋಲ್ಟೇಜ್ ವಿದ್ಯುತ್ ಟವರ್ ಏರಿ ಈ ವ್ಯಕ್ತಿ ಕುಳಿತಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವಣೆ ಸೃಷ್ಟಿಯಾಗಿತ್ತು. ಅಶೋಕ್ ಕುಮಾರ್ ಎಂಬುವವರೇ ಈ ದುಸ್ಸಾಹಸಕ್ಕೆ ಕೈಹಾಕಿದವರು.
ನಿಧಾನವಾಗಿ ವ್ಯಕ್ತಿ ವಿದ್ಯುತ್ ತಂತಿಗಳ ಮೇಲೆ ನಡೆದುಕೊಂಡೇ ಮುಂದೆ ಸಾಗಿದ್ದಾರೆ. ಆದರೆ ಅದೃಷ್ಟ ಚೆನ್ನಾಗಿತ್ತು. ಅವನು ಕಂಬ ಏರುವ ಹೊತ್ತಿಗೆ ವಿದ್ಯುತ್ ಹರಿಯುತ್ತಿರಲಿಲ್ಲ. ಪರಿಣಾಮ ದುರಂತದಿಂದ ಪಾರಾಗಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಅಶೋಕ್ ಕುಮಾರ್ ಕೃಷಿಕನಾಗಿದ್ದು, ಸೌಭಾಗ್ಯ ಯೋಜನೆಯಡಿ ಮೂರು ವರ್ಷಗಳ ಹಿಂದೆ ಉಚಿತ ವಿದ್ಯುತ್ ಸಂಪರ್ಕ ಪಡೆದಿದ್ದರು. ಆದರೂ ನಿರಂತರವಾಗಿ ಕರೆಂಟ್ ಬಿಲ್ ಬರುತ್ತಿದೆ. ಮೊನ್ನೆ ಶನಿವಾರ 8 ಸಾವಿರದ 700 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಇದರಿಂದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಇದನ್ನು ನೋಡಿ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಈ ಪರಿಯ ಬಿಲ್ ನೋಡಿದ ಅಶೋಕ್ ಸಿಕ್ಕಾಪಟ್ಟೆ ಮಾನಸಿಕವಾಗಿ ಕುಗ್ಗಿಹೋದರು. ಎಷ್ಟೇ ಮನವಿ ಮಾಡಿಕೊಂಡರೂ, ತಮಗೆ ಉಚಿತ ವಿದ್ಯುತ್ ಸೌಲಭ್ಯ ಇದೆ ಎಂದರೂ ಅಧಿಕಾರಿಗಳು ಕೇಳದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದು ಹೈವೋಲ್ಟೇಜ್ ವಿದ್ಯುತ್ ತಂತಿ ಮೇಲೇರಿದ್ದಾರೆ. ಇದು ಪತ್ನಿಗೆ ಗೊತ್ತಾದದ್ದು ಗದ್ದೆಗೆ ಭತ್ತ ನಾಟಿ ಮಾಡಲು ಹೋದಾಗ!
ಪತಿ ಹೀಗೆ ಮಾಡಿದ್ದನ್ನು ನೋಡಿ ಶಾಕ್ ಆದ ಪತ್ನಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಅಶೋಕ್ ಅವರನ್ನು ಕೆಳಗೆ ಇಳಿಸಿದ್ದಾರೆ. ತಂತಿಯಲ್ಲಿ ಕರೆಂಟ್ ಬರದ ಕಾರಣ ಭಾರಿ ಅನಾಹುತ ತಪ್ಪಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)