

ಕೋಯಿಕ್ಕೋಡ್: ಕೇರಳ ಸಾಂಪ್ರದಾಯಿಕ ಮತ್ತು ಅದ್ಧೂರಿಯ ಮದುವೆಗೆ ಸಾಕ್ಷಿಯಾಗಿದೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದ್ಧೂರಿ ಮದುವೆಗಳಿಗೆ ಬ್ರೇಕ್ ಹಾಕಲಾಗಿದೆ. ಸರ್ಕಾರ ವಿಧಿಸಿರುವ ಷರತ್ತಿಗಿಂತ ಹೆಚ್ಚಿನ ಜನರು ಮದುವೆಗೆ ಬಂದರೆ ಅವರ ಮೇಲೆ ಕೇಸ್ ದಾಖಲಾಗುತ್ತಿದೆ.
ಇದನ್ನೇ ವಿರೋಧಿಸಿ ಇದೀಗ ಜೋಡಿಯೊಂದು ಕೋಯಿಕ್ಕೋಡ್‌ನ ಮದ್ಯದ ಅಂಗಡಿ ಮುಂದೆ ಮದುವೆಯಾಗಿದೆ. ಅಷ್ಟಕ್ಕೂ ಈ ಮದುವೆಯಾಗಲು ಕಾರಣ ಅವರೇನೂ ಎಣ್ಣೆಪ್ರಿಯರಲ್ಲ, ಬದಲಿಗೆ ಸರ್ಕಾರದ ದ್ವಂದ್ವ ನೀತಿ ಎನ್ನುವುದು ಅವರ ಆರೋಪ.
ಮದುವೆ ಕಾರ್ಯಗಳನ್ನು ನಂಬಿ ಹಲವರು ಜೀವನ ನಡೆಸುತ್ತಿದ್ದಾರೆ. ಆದರೆ ಕರೊನಾದ ಹೆಸರು ಹೇಳಿ ಮದುವೆಗೆ ಷರತ್ತು ವಿಧಿಸಲಾಗಿದೆ. ಆದರೆ ಅದೇ ಇನ್ನೊಂದೆಡೆ ಎಣ್ಣೆ ಅಂಗಡಿಗಳ ಮುಂದೆ ಯಾವುದೇ ರೂಲ್ಸ್ ಇಲ್ಲದೇ, ಜನರು ನುಗ್ಗುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕರೊನಾ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಅವರ ವಿರುದ್ಧ ಕೇಸ್ ದಾಖಲಾಗುತ್ತಿಲ್ಲ. ಆದರೆ ಮದುವೆ ಮನೆಯಲ್ಲಿ ಎಲ್ಲಾ ನಿಯಮಗಳನ್ನು ಅಳವಡಿಸಿಕೊಂಡರೂ ಕೇಸ್ ದಾಖಲು ಮಾಡಲಾಗುತ್ತಿದೆ. ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಕ್ವಾಟರರ್ಸ್ ಅಸೋಸಿಯೇಷನ್ ಸದಸ್ಯರು ಈ ಮದುವೆ ಮಾಡಿಸಿದ್ದಾರೆ. ರಾಮನಟ್ಟುಕರದ್ ಪ್ರಮೋದ್ ಮತ್ತು ಪಂತೀರನ್ಕವಿನ ಧನ್ಯಾ ಮದುವೆಯಾಗಿರುವ ಜೋಡಿ. ಇದಕ್ಕೆ ಸಂಸದ ಎಂ.ಕೆ. ರಾಘವನ್ ಕೂಡ ಬೆಂಬಲಿಸಿದ್ದಾರೆ. ಸರ್ಕಾರದ ಕಠಿಣ ನಿಯಮಗಳಿಂದಾಗಿ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯದೆ ಅನೇಕ ಮಂದಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಎಂದು ರಾಘವನ್ ಹೇಳಿದ್ದಾರೆ.