ಪತಿ ಮೇಕಪ್​ ಮಾಡ್ತಾರೆ... ಹೇರ್​ಬ್ಯಾಂಡ್​ ಹಾಕ್ತಾರೆ... ಪತಿ ವಿರುದ್ಧ ಕೋರ್ಟ್​ ಮೊರೆ ಹೋದ ಮಹಿಳೆ

makeup
ಸಾಂದರ್ಭಿಕ ಚಿತ್ರ
Published on

ಇಂದೋರ್ (ಮಧ್ಯಪ್ರದೇಶ): ನನ್ನ ಪತಿ ಸಂಜೆಯಾಗ್ತಿದ್ದಂತೆಯೇ ಮೇಕಪ್ ಮಾಡಲು ಶುರು ಮಾಡ್ತಾರೆ, ಹೆಣ್ಣುಮಕ್ಕಳಂತೆಯೇ ಕೂದಲಿಗೆ ಹೇರ್ ಬ್ಯಾಂಡ್ ಹಾಕುವುದು, ಕಿವಿಯೋಲೆ ಇಟ್ಕೊಳ್ಳುವುದು ಮಾಡುತ್ತಾರೆ. ಹಣೆಯ ಮೇಲೆ ಹೆಂಗಸರಂತೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ತುಟಿಗಳಿಗೆ ಲಿಪ್​ಸ್ಟಿಕ್​ ಹಚ್ಚುತ್ತಾರೆ. ಇದರ ಬಗ್ಗೆ ಕೇಳಿದಾಗ ನನ್ನ ಮೇಲೆ ಹಲ್ಲೆ ಮಾಡುತ್ತಾರೆ...

ಹೀಗೆಂದು ಮಧ್ಯಪ್ರದೇಶ ಇಂದೋರ್​ನ ಲಸುಡಿಯಾ ನಿವಾಸಿಯೊಬ್ಬರು ಕೋರ್ಟ್​ ಮೊರೆ ಹೋಗಿದ್ದಾರೆ. 32 ವರ್ಷದ ಇಂಜಿನಿಯರ್ ದಿಲೇಶ್ವರ್ ವಿರುದ್ಧ ಅವರ ಪತ್ನಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ವಿಚ್ಛೇದನಕ್ಕೆ ಕೋರಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ದಂಪತಿಯದ್ದು ಪ್ರೇಮ ವಿವಾಹ.

ಕೆಲ ವರ್ಷಗಳಿಂದ ಪ್ರೀತಿಸಿ ವಿವಾಹವಾದ ಎರಡು ವರ್ಷಗಳ ಬಳಿಕ ತಮ್ಮ ಪತಿ ಈ ರೀತಿ ವರ್ತಿಸುತ್ತಿರುವುದು ಮಹಿಳೆಗೆ ತಿಳಿದಿದೆ, ಮಾತ್ರವಲ್ಲದೇ ದೈಹಿಕ ಸಂಪರ್ಕ ಬೆಳೆಸಲೂ ಪತಿ ನಿರಾಕರಿಸುತ್ತಿರುವುದಾಗಿ ಅವರು ಕೋರ್ಟ್​ಗೆ ಹೇಳಿದ್ದಾರೆ. ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ಸಹ ಸಲ್ಲಿಸಿದ್ದಾರೆ.

2018 ರಂದು ವಿವಾಹವಾದ ಇವರು, ಪುಣೆಯಲ್ಲಿ ನೆಲೆಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪತಿ ದೈಹಿಕ ಸಂಬಂಧ ಬೆಳೆಸಿಲ್ಲ. ಕೇಳಿದರೆ ಹಲ್ಲೆ ಮಾಡಲು ಬರುತ್ತಾರೆ. ಅವರ ಅಪ್ಪ-ಅಮ್ಮ ಕೂಡ ನನ್ನನ್ನು ನಿಂದಿಸುತ್ತಾರೆ, ಹಲ್ಲೆ ಮಾಡುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ಹೆಣ್ಣುಮಕ್ಕಳ ರೀತಿ ವರ್ತಿಸುತ್ತಾರೆ ಎಂದು ಪತ್ನಿ ದೂರಿದ್ದಾರೆ. ತಮ್ಮ ಅತ್ತೆ- ಮಾವ ತಮ್ಮ ಮೇಲೆ ಮಾಡುತ್ತಿರುವ ಹಿಂಸೆಗಳ ಕುರಿತೂ ಅವರು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂತ್ರಸ್ತೆಗೆ ಪ್ರತಿ ತಿಂಗಳು 30 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿರುವ ಕೋರ್ಟ್​, ಮಹಿಳೆ ನೀಡಿರುವ ದೂರಿನ ಅನ್ವಯ ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net