ನಿಮ್ಮ ಖಾಸಗಿ ವಿಷಯ ನೀವೇ ಇಟ್ಕೊಳಿ, ನಮಗೆ ಬೇಡಪ್ಪ ಎಂದ ವಾಟ್ಸ್​ಆ್ಯಪ್​ ಏನು ಹೇಳಿದೆ ನೋಡಿ...

whatsapp
Published on

ನವದೆಹಲಿ: ವಾಟ್ಸ್​ಆ್ಯಪ್​ ಬರುವ ಫೆಬ್ರುವರಿಯಿಂದ ಕೆಲವೊಂದು ಷರತ್ತುಗಳನ್ನು ಹೇರಿರುವ ಬೆನ್ನಲ್ಲೇ ಹಲವಾರು ಮಂದಿ ವಾಟ್ಸ್​ಆ್ಯಪ್​ ಅನ್​ಇನ್​ಸ್ಟಾಲ್​ ಮಾಡಿಕೊಂಡು ಟೆಲಿಗ್ರಾಂ, ಸಿಗ್ನಲ್‌ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಲು ಪ್ರಾರಂಭಿಸಿದ್ದಾರೆ.

ಖಾಸಗಿಯಾಗಿರುವ ಎಲ್ಲಾ ವಿಷಯಗಳನ್ನು ವಾಟ್ಸ್​ಆ್ಯಪ್​ ಪಡೆದುಕೊಳ್ಳುತ್ತದೆ, ಯಾರ ಜತೆ ಮಾತನಾಡಿದ್ದಾರೆ, ಏನು ಮಾತನಾಡಿದ್ದಾರೆ, ಬ್ಯಾಂಕ್​ ಖಾತೆ ಏನಿದೆ? ಎಲ್ಲಿಲ್ಲಿ ಹೋಗುತ್ತಾರೆ ಇತ್ಯಾದಿಯಾಗಿ ಪ್ರತಿಯೊಂದು ಖಾಸಗಿತನವನ್ನು ವಾಟ್ಸ್​ಆ್ಯಪ್​ ಬಳಸಿಕೊಳ್ಳಲಿದೆ ಎಂದ ಹಿನ್ನೆಲೆಯಲ್ಲಿ, ಇಂಥದ್ದೊಂದು ಕ್ರಮಕ್ಕೆ ಹಲವಾರು ಮಂದಿ ಮುಂದಾಗಿದ್ದಾರೆ.

ಈ ಹೊಸ ಷರತ್ತುಗಳನ್ನು ಒಪ್ಪದೇ ಹೋದರೆ ವಾಟ್ಸ್​ಆ್ಯಪ್​ ಬ್ಲಾಕ್​ ಮಾಡಲಾಗುವುದು ಎಂಬ ಎಚ್ಚರಿಕೆ ಬಂದ ಬೆನ್ನಲ್ಲೇ ಅವರು ಮಾಡುವ ಮೊದಲೇ ನಾವೇ ಅದನ್ನು ಬಾಯ್​ಕಾಟ್​ ಮಾಡುವ ಎಂದುಕೊಂಡು ಹಲವಾರು ಮಂದಿ ಅನ್​ಇನ್​ಸ್ಟಾಲ್​ ಮಾಡಲು ಶುರುವಿಟ್ಟುಕೊಂಡಿದ್ದಾರೆ.

ಇದೀಗ ಈ ಕ್ರಮದಿಂದ ಬೆದರಿರುವ ವಾಟ್ಸ್​ಆ್ಯಪ್​ ಕೆಲವೊಂದು ಸ್ಪಷ್ಟನೆಗಳನ್ನು ನೀಡಿದೆ. ತನ್ನ ಟ್ವಿಟರ್‌ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿದ ವಾಟ್ಸ್​ಆ್ಯಪ್​ ಕಂಪೆನಿಯು ನಿಮ್ಮ ಯಾವುದೇ ಖಾಸಗಿ ಸಂದೇಶ ನಮಗೆ ಬೇಡ, ಯಾವುದೇ ಕಾರಣಕ್ಕೂ ನಿಮ್ಮ ಖಾಸಗಿ ಸಂದೇಶಗಳನ್ನು ನೋಡುವುದಿಲ್ಲ. ಇಲ್ಲಸಲ್ಲದ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಹೇಳಿದೆ.

ಟ್ವಿಟರ್​ನಲ್ಲಿ ನೀಡಿರುವ ಮಾಹಿತಿ ಈ ರೀತಿ ಇವೆ ನೋಡಿ.

* ನಿಮ್ಮ ಕಾಲ್‌ ಅಥವಾ ನಿಮ್ಮ ಖಾಸಗಿ ಮೆಸೇಜ್‌ ಗಳನ್ನು ವಾಟ್ಸ್​ಆ್ಯಪ್​ ಅಥವಾ ಫೇಸ್​ಬುಕ್‌ ವೀಕ್ಷಿಸಲು ಸಾಧ್ಯವಿಲ್ಲ.

* ನಿಮಗೆ ಕರೆ ಮಾಡುವವರ ಮಾಹಿತಿ, ಮೆಸೇಜ್‌ ಮಾಡುವವರು ಯಾರು ಎಂಬಿತ್ಯಾದಿ ಪಟ್ಟಿಯನ್ನು ವಾಟ್ಸ್​ಆ್ಯಪ್​ ಸಿದ್ಧಪಡಿಸಿಟ್ಟುಕೊಳ್ಳುವುದಿಲ್ಲ.

* ನೀವು ಶೇರ್‌ ಮಾಡಿದ ಲೊಕೇಶನ್‌ ಅನ್ನು ವಾಟ್ಸ್​ಆ್ಯಪ್​ ಅಥವಾ ಫೇಸ್​ಬುಕ್​ ನೋಡಲು ಸಾಧ್ಯವಿಲ್ಲ

* ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ ಅನ್ನು ನಾವು ಪಡೆಯುವುದಿಲ್ಲ.

* ನಿಮ್ಮ ವಾಟ್ಸ್​ಆ್ಯಪ್ ಗ್ರೂಪ್‌ ಖಾಸಗಿಯಾಗಿಯೇ ಇರುತ್ತವೆ. ಸಾರ್ವಜನಿಕವಾಗಿರುವುದಿಲ್ಲ.

ನಿಮ್ಮ ಸಂದೇಶಗಳನ್ನು ನೀವು ಮರೆಮಾಡಬಹುದು

* ನಿಮ್ಮ ಡೇಟಾವನ್ನು ನೀವು ನಿಶ್ಚಿಂತೆಯಿಂದ ಡೌನ್​ಲೋಡ್​ ಮಾಡಿಕೊಳ್ಳಬಹುದು

'ನಾವು ಈ ಡೇಟಾವನ್ನು ಜಾಹೀರಾತುಗಳಿಗಾಗಿ ಫೇಸ್​ಬುಕ್​ನೊಂದಿಗೆ ಹಂಚಿಕೊಳ್ಳುವುದಿಲ್ಲ. ಮತ್ತೆ, ಈ ಖಾಸಗಿ ಚಾಟ್​ಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುತ್ತವೆ, ಆದ್ದರಿಂದ ಅವುಗಳ ವಿಷಯವನ್ನು ನಾವು ನೋಡುವುದಿಲ್ಲ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net