

ಬಲ್ಗೇರಿಯಾ: ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೆಲವು ಕಾಲಜ್ಞಾನಿಗಳು ನುಡಿದಿರುವ ಭವಿಷ್ಯಗಳ ಮುಂದೆ ಎಲ್ಲವೂ ಗೌಣ ಎನಿಸುವುದು ಉಂಟು. ನೂರಾರು ವರ್ಷಗಳ ಭವಿಷ್ಯವನ್ನು ಮೊದಲೇ ನುಡಿದಿದ್ದ ಅಪರೂಪದ ಕಾಲಜ್ಞಾನಿಗಳ ಪೈಕಿ ಒಬ್ಬರು ಜಗತ್ಪ್ರಸಿದ್ಧಿ ಪಡೆದಿರುವ ಬಲ್ಗೇರಿಯಾದ ಬಾಬಾ ವಾಂಗಾ. ಅತೀಂದ್ರಿಯ ಶಕ್ತಿಯಿರುವ ಬಾಬಾ ವಾಂಗಾ ಅವರು ನುಡಿದಿರುವ ಹಲವಾರು ಭವಿಷ್ಯಗಳು ನಿಜವಾಗುತ್ತಿರುವುದು ಅಚ್ಚರಿಯುಂಟು ಮಾಡುತ್ತಿದೆ.
9/ 11ರ ಭಯೋತ್ಪಾದಕ ದಾಳಿ, ಪುತಿನ್ ಅಧಿಕಾರಕ್ಕೆ ಏರುವುದು, ಅಮೆರಿಕ, ಭಾರತದ ಭವಿಷ್ಯ, ಸುನಾಮಿ, ಪ್ರವಾಹ, ಪ್ರಕೃತಿ ವಿಕೋಪ ಸೇರಿದಂತೆ ಹಲವು ವಿಚಾರಗಳು ಎಲ್ಲವೂ ನಿಜವಾಗಿವೆ. ಬರಾಕ್ ಒಬಾಮ ಅವರ ಅಧ್ಯಕ್ಷತೆ ಬಗ್ಗೆಯೂ ಭವಿಷ್ಯ ನುಡಿದಿದ್ದರು, ಅಮೆರಿಕದ 45ನೇ ಅಧ್ಯಕ್ಷರು "ದೇಶವನ್ನು ಕೆಳಕ್ಕೆ ತರುವ" ದುರಂತವನ್ನು ಎದುರಿಸುತ್ತಾರೆ ಎಂದು ಸಹ ಹೇಳಿದ್ದರು. ಅದರಂತೆ ಡೊನಾಲ್ಡ್ ಟ್ರಂಪ್ ಆಳ್ವಿಕೆಯಲ್ಲಿ ಅಮೆರಿಕ ಕೊಂಚ ಎಡವಿತ್ತು.
ಬಾಬಾ ವಾಂಗಾ ರಷ್ಯಾದ ಕುರಿತು ನುಡಿದಿರುವ ಭವಿಷ್ಯವೀಗ ಎಲ್ಲೆಡೆ ವೈರಲ್ ಆಗಿದ್ದು, ನಿಜಕ್ಕೂ ಇವರಿಗೆ ಇಂಥದ್ದೊಂದು ಅದ್ಭುತ ಶಕ್ತಿ ಇತ್ತಾ ಎಂದು ಅಚ್ಚರಿಯಾಗದೇ ಇರದು. 1979ರಲ್ಲಿ ವಾಂಗಾ ಹೇಳಿದ್ದೇನೆಂದರೆ, ರಷ್ಯಾ ಅಧಿಪತಿಯಾಗಲಿದೆ. ಯುರೋಪ್ ಒಂದು ಪಾಳು ಭೂಮಿ ಆಗುತ್ತದೆ. ಎಲ್ಲವೂ ಮಂಜುಗಡ್ಡೆಯಂತೆಯೇ ಕರಗುತ್ತದೆ, ಒಬ್ಬರು ಮಾತ್ರ ಗಟ್ಟಿಯಾಗಿ ಉಳಿಯುತ್ತಾರೆ - ವ್ಲಾಡಿಮಿರ್‌ನ ಘನತೆ, ರಷ್ಯಾದ ವೈಭವ ಉಳಿದುಕೊಳ್ಳುತ್ತದೆ’ ಎಂದು ವಾಂಗಾ ಹೇಳಿದ್ದರು.
ಆದರೂ, ಬರಾಕ್ ಒಬಾಮಾ ಅಮೆರಿಕದ ಕೊನೆಯ ಅಧ್ಯಕ್ಷರಾಗುತ್ತಾರೆ ಎಂಬ ವಾಂಗಾ ಭವಿಷ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಯಾರೀ ಬಾಬಾ ವಾಂಗಾ?
ಬಲ್ಗೇರಿಯಾ ಮೂಲದ ಬಾಬಾ ವಾಂಗಾ 12ನೇ ವರ್ಷಕ್ಕೆ ದೃಷ್ಟಿ ಕಳೆದುಕೊಂಡಿದ್ದರು. ಬಿರುಗಾಳಿಯ ಸಮಯದಲ್ಲಿ ಧೂಳಿನ ಕಣಗಳು ಕಣ್ಣಿಗೆ ಬಡಿದ ಕಾರಣ, ದೃಷ್ಟಿ ಹೋಗಿತ್ತು. ಆಗಿನಿಂದ ದೇವರು ತನಗೆ ದಿವ್ಯದೃಷ್ಟಿ ನೀಡಿದ ಎನ್ನುವ ಅವರಿಗೆ ಎಲ್ಲ ವರ್ಷದ ಭವಿಷ್ಯ ಕಾಣಸಿಗುತ್ತಿತ್ತಂತೆ. ಈಕೆ ಆಧುನಿಕ ನಾಸ್ಟ್ರಡಾಮಸ್ ಎಂದೇ ಹೆಸರಾಗಿದ್ದಾರೆ. 9/11 ದಾಳಿ, ಬ್ರೆಕ್ಸಿಟ್ ಭವಿಷ್ಯ, ಥೈಲ್ಯಾಂಡ್ ಸುನಾಮಿ, ಒಬಾಮಾ ಅಧ್ಯಕ್ಷ ಪದವಿ, ಸೋವಿಯತ್ ಒಕ್ಕೂಟ ಪತನ, ಪ್ರಿನ್ಸ್ ಡಯಾನಾ ದುರಂತ ಅಂತ್ಯ, ಚರ್ನೋಬಿಲ್ ದುರಂತ… ಸೇರಿದಂತೆ 2019ರ ಹೊತ್ತಿಗೆ ಭೀಕರ ವೈರಸ್ ಇಡೀ ವಿಶ್ವವನ್ನು ಆವರಿಸಲಿದೆ ಎಂಬ ಬಗ್ಗೆಯೂ ಭವಿಷ್ಯ ನುಡಿದಿದ್ದರು.
1996ರಲ್ಲೇ ವಾಂಗಾ ಮೃತಪಟ್ಟಿದ್ದರೂ 5079ನೇ ಇಸವಿಯವರೆಗೆ ಆಕೆ ಭವಿಷ್ಯ ನುಡಿದಿದ್ದಾರೆ. 5079ರಲ್ಲಿ ಜಗತ್ತು ಕೊನೆಯಾಗುತ್ತದೆ ಎಂಬುದು ಆಕೆಯ ಮಾತು. ಇದೀಗ ಅವರು ನುಡಿದಿರುವ 2022ರ ಭವಿಷ್ಯ ವೈರಲ್ ಆಗಿದೆ.